ಕಲಬುರಗಿ: ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಕಲಬುರಗಿ ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಒಡತಿ ಇನ್ನೂ ಪತ್ತೆಯಾಗದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಕಳೆದ ಏಳು ದಿನಗಳಿಂದ ಸಿಐಡಿ ಪೋಲಿಸರು ದಿವ್ಯಾ ಹಾಗರಗಿಗಾಗಿ ಹುಡಕಾಟ ನಡೆಸುತ್ತಿದ್ದರೂ ಕೂಡ ಈವರೆಗೂ ದಿವ್ಯ ಪತ್ತೆಯಾಗಿಲ್ಲ. ದಿವ್ಯಾ ಪತಿ ರಾಜೇಶ್ ಹಾಗರಗಿಯ ಮಾಹಿತಿ ಮೇರೆಗೆ ವಿಜಯಪುರಕ್ಕೂ ಕೂಡ ಸಿಐಡಿ ತಂಡ ಹೋಗಿ ಬರಿಗೈನಲ್ಲಿ ವಾಪಸಾಗಿದ್ದಾರೆ.
ದಿವ್ಯಾ ಹಾಗರಗಿ ಕರ್ನಾಟಕ ಬಿಟ್ಟು ಬೇರೆಲ್ಲೂ ಹೋಗಿಲ್ಲ. ದಿವ್ಯಾ ಹಾಗರಗಿ ಬೆಂಗಳೂರಿನಲ್ಲೇ ನೆಲೆಸಿರುವ ಶಂಕೆ ಹುಟ್ಟಿಕೊಂಡಿವೆ. ಹೀಗಾಗಿ ಸಿಐಡಿ ಅಧಿಕಾರಿಗಳಿಂದ ದಿವ್ಯಾ ಹಾಗರಗಿಗಾಗಿ ಬೆಂಗಳೂರಿನಲ್ಲಿ ಶೋಧ ಕಾರ್ಯ ಮುಂದುವರಿದಿದೆ. ಮತ್ತೊಂದೆಡೆ ಜ್ಞಾನ ಜ್ಯೋತಿ ಶಾಲೆಯ ಮುಖ್ಯೋಪಾಧ್ಯಾಯ ಕಾಶಿನಾಥ್, ಮತ್ತಿಬ್ಬರು ಶಿಕ್ಷಕರು ಹಾಗೂ ಪಿಎಸ್ಐ ಕ್ಯಾಂಡಿಡೇಟ್ಗಳನ್ನು ಹುಡುಕಿ ಡೀಲ್ ಕುದುರಿಸುತ್ತಿದ್ದ ನೀರಾವರಿ ಇಲಾಖೆಯ ಇಂಜಿನಿಯರ್ ಕೂಡ ನಾಪತ್ತೆಯಾಗಿದ್ದಾರೆ. ಇಂದು ಜ್ಞಾನ ಜ್ಯೋತಿ ಶಾಲೆಯ ಮುಖ್ಯೋಪಾಧ್ಯಾಯ ಕಾಶಿನಾಥ್ ಮನೆಗೆ ಕೋರ್ಟ್ ನಿಂದ ಸರ್ಚ್ ವಾರೆಂಟ್ ಪಡೆದು ಸಿಐಡಿ ತಂಡ ಭೇಟಿ ನೀಡಲಿದೆ ಎನ್ನಲಾಗ್ತಿದೆ.
ವಿಚಾರಣೆ: ಪ್ರಕರಣಕ್ಕೆ ಸಂಭಂದಿಸಿದಂತೆ ಪಿಎಸ್ಐ ಪರೀಕ್ಷೆ ಬರೆದ 50 ಅಭ್ಯರ್ಥಿಗಳ ವಿಚಾರಣೆಗೆ ಸಿಐಡಿ ಮುಂದಾಗಿದೆ. ಇಂದು ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ಸಿಐಡಿ ಕಚೇರಿಗೆ ಹಾಜರಾಗುವಂತೆ 50 ಅಭ್ಯರ್ಥಿಗಳಿ ನೋಟಿಸ್ ಜಾರಿ ಮಾಡಲಾಗಿತ್ತು. ಕಲಂ 91 ಸಿಆರ್‌ಪಿಸಿ ಅಡಿಯಲ್ಲಿ ವಿಚಾರಣೆಗೆ ಹಾಜುರಾಗುವಂತೆ ನೋಟಿಸ್ ನೀಡಲಾಗಿತ್ತು. ಅದರಂತೆ ವಿಚಾರಣೆ ನಡೆಯುತ್ತಿದೆ.
ಮೂರು ಜನ ಅಭ್ಯರ್ಥಿಗಳು ಹಾಗೂ ಮೂರು ಜನ ಮೇಲ್ವಿಚಾರಕರ ಸಿಐಡಿ ಕಸ್ಟಡಿ ಇಂದು ಅಂತ್ಯವಾಗಲಿದೆ. ಬಂಧಿತ ಆರೋಪಿಗಳಾದ ಪ್ರವೀಣ್ ಕುಮಾರ್, ಚೇತನ್ ನಂದಗಾಂವ್, ಅರುಣ್ ಪಾಟೀಲ್ ಮತ್ತು ಮೇಲ್ವಿಚಾರಕರಾದ ಸುಮಾ, ಸಿದ್ದಮ್ಮಾ, ಸಾವಿತ್ರಿ ಕಸ್ಟಡಿ ಅಂತ್ಯವಾಗಲಿದೆ.
ಇದನ್ನೂ ಓದಿ: ಪಿಎಸ್ಐ ನೇಮಕಾತಿ ಅಕ್ರಮ: ಅರ್ಹ ಅಭ್ಯರ್ಥಿಗಳಿಗೂ ಸಂಕಷ್ಟ
ಸರ್ಕಾರದ ಹಲವು ಸಚಿವರ ಜೊತೆ ಉತ್ತಮ ಒಡನಾಟ ಹೊಂದಿದ್ದರೆನ್ನಲಾದ ದಿವ್ಯಾ ಹಾಗರಗಿ ಕಲಬುರಗಿ, ವಿಜಯಪುರ ಬಿಟ್ಟು ಬೆಂಗಳೂರು ಸೇಫ್ ಅಂತ ಬೆಂಗಳೂರಿನಲ್ಲಿ ಬೀಡು ಬಿಟ್ಟಿದ್ದಾರೆ. ಬೆಂಗಳೂರಿನಲ್ಲಿ ಸಚಿವರ ಆಶ್ರಯದಲ್ಲಿ ಸೇಫ್ ಆಗಿದ್ದಾರಾ ದಿವ್ಯಾ ಹಾಗರಗಿ? ಎಂಬ ಅನುಮಾನಗಳು ದಟ್ಟವಾಗುತ್ತಿವೆ. ದಿವ್ಯಾ ಹಾಗರಗಿ ಹಿಂದೆ ಪ್ರಭಾವಿ ಸಚಿವರು ಇರುವ ಹಿನ್ನೆಲೆ ಸಿಐಡಿ ಅಧಿಕಾರಿಗಳು ದಿವ್ಯಾರನ್ನು ಪತ್ತೆ ಮಾಡಲು ಆಗುತ್ತಿಲ್ಲವೇ ಎಂಬ ಮಾತುಗಳು ಕಾಂಗ್ರೆಸ್ ನಾಯಕರದ್ದಾಗಿದೆ.
ಈ ಕುರಿತು ಮಾತನಾಡಿರುವ ಕಾಂಗ್ರೆಸ್ ಮಾಜಿ ಶಾಸಕ ಬಿ ಆರ್ ಪಾಟೀಲ್, ಇದೊಂದು ದೊಡ್ಡ ಹಗಹರಣ, ದಿವ್ಯಾ ಹಾಗರಗಿ ಎಲ್ಲಿದಾರೆ ಎಂಬುದು ಬಿಜೆಪಿ ಮುಖಂಡರಿಗೆ ಗೊತ್ತಿದೆ. ಅವರ ಆಶ್ರಯದಲ್ಲೇ ದಿವ್ಯಾ ಇದ್ದಾರೆ ಎಂದು ಆರೋಪಿಸಿದ್ದಾರೆ.