ಕಲಬುರಗಿ: ಜಿಲ್ಲೆಯಲ್ಲಿಯೂ ಸಹ ಬೆಡ್ ಬ್ಲಾಕಿಂಗ್ ದಂಧೆ ನಡೆಯುತ್ತಿದೆಯಾ ಎಂಬ ಅನುಮಾನ ಹೆಚ್ಚಾಗಿದೆ. ಬಿಜೆಪಿಯ ನಾಯಕರಿಗೆ ಕರೆ ಮಾಡಿದರೆ ನೀವು ಹೆಸರು ಕೋಡಿ, ನಾನು ಬೆಡ್ ಕೊಡಿಸುತ್ತೇನೆ ಅಂತ ಹೇಳುತ್ತಿದ್ದಾರೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ರೆಮ್ಡಿಸಿವರ್ ಇಂಜೆಕ್ಷನ್ ಕೊಡಿಸಿ ಅಂದ್ರೆ ಆಸ್ಪತ್ರೆಗೆ ದಾಖಲಾಗಿ ಅಂತಾರೆ. ಇಲ್ಲೂ ಕೂಡ ಬೆಡ್ ಬ್ಲಾಕಿಂಗ್ ದಂಧೆ ಬಗ್ಗೆ ಅನುಮಾನ ಬರ್ತಿದೆ. ಈ ಕುರಿತು ಸೂಕ್ತ ತನಿಖೆಯಾಗಬೇಕು. ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಆಕ್ಸಿಜನ್ ಪೂರೈಕೆ ಮಾಡುವಂತೆ ಸೂಚನೆ ನೀಡಿದೆ. ರಾಜ್ಯದಲ್ಲಿ ಇಷ್ಟು ಜನ ಸಂಸದರಿದ್ದರೂ ಯಾರೊಬ್ಬರೂ ಮಾತಾಡದೆ ಸುಮ್ಮನಿರೋದನ್ನು ನೋಡಿದ್ರೆ, ಬದುಕಿದ್ದಾರಾ ಅಥವಾ ಅತ್ತಿದ್ದಾರಾ ಅನ್ನಿಸುತ್ತಿದೆ. ರಾಜ್ಯದ ಕೇಂದ್ರ ಸಚಿವರು ರಾಜ್ಯದ ಪರವಾಗಿ ಮಾತಾಡೋಕೆ ಆಗಲ್ಲ ಅಂದ್ರೆ, ರಾಜೀನಾಮೆ ಕೊಟ್ಟು ನಮ್ಮ ಜೊತೆ ಹೋರಾಟ ಮಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಕ್ಸಿಜನ್ ರಾತ್ರೋರಾತ್ರಿ ಸಪ್ಲೈ:
ಇಲ್ಲಿನ ಆಕ್ಸಿಜನ್ ರಾತ್ರೋರಾತ್ರಿ ಮಹಾರಾಷ್ಟ್ರ ಮತ್ತು ತೆಲಂಗಾಣಕ್ಕೆ ಸರಬರಾಜು ಆಗುತ್ತಿದೆ. ಆದರೂ ಯಾರು ತೆಲಕೆಡಿಸಿಕೊಳ್ಳುತ್ತಿಲ್ಲ. ಮಹಾರಾಷ್ಟ್ರ ಸರ್ಕಾರ ತಮ್ಮ ರಾಜ್ಯದ ಆಕ್ಸಿಜನ್ನನ್ನು ತಮ್ಮ ರಾಜ್ಯಕ್ಕೆ ಬಳಕೆ ಮಾಡಿಕೊಳ್ಳುವಂತೆ ಆದೇಶ ಮಾಡಿದೆ. ಆದರೆ, ಕರ್ನಾಟಕದ ಸರ್ಕಾರ ಯಾಕೆ ಈ ರೀತಿಯ ಆದೇಶ ಮಾಡಿಲ್ಲ. ಮುಂದಿನ ಒಂದು ತಿಂಗಳಿಗೆ ಜಿಲ್ಲೆಗೆ ಬೇಕಾಗುವ ಆಕ್ಸಿಜನ್ ಬಗ್ಗೆ ಮಾಹಿತಿ ಪಡೆದು ಸಂಗ್ರಹಿಸಬೇಕಾಗಿದೆ ಎಂದು ಒತ್ತಾಯಿಸಿದ್ದಾರೆ.