ಕಲಬುರಗಿ: ಕಲಬುರಗಿ ಕಂದಾಯ ವಿಭಾಗದಲ್ಲಿ ಶಿರಸ್ತೇದಾರ ಹಾಗೂ ಉಪ ತಹಶೀಲ್ದಾರ್ ಹುದ್ದೆಗಳು ಖಾಲಿ ಬಿದ್ದಿವೆ. ಹೀಗಾಗಿ ಅರ್ಹ ಪ್ರಥಮ ದರ್ಜೆ ಸಹಾಯಕ, ಕಂದಾಯ ನಿರೀಕ್ಷಕ ಮತ್ತು ಶೀಘ್ರ ಲಿಪಿಗಾರರನ್ನು ಶಿರಸ್ತೇದಾರ ಹಾಗೂ ಉಪ ತಹಶೀಲ್ದಾರ ಹುದ್ದೆಗಳಿಗೆ ಸ್ಥಾನವನ್ನ ಪದೋನ್ನತಿ ನೀಡಿ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಸುಬೋಧ ಯಾದವ್ ಅವರು ಜುಲೈ 26ರಂದು ಆದೇಶ ಹೊರಡಿಸಿದ್ದಾರೆ.
ಇಲಾಖಾ ಮುಂಬಡ್ತಿ ಸಮಿತಿ ಸಭೆ ನಡೆಸಿ, ಸ್ಥಳೀಯ ವೃಂದದಲ್ಲಿ 38 ಜನರನ್ನು ಹಾಗೂ ಸ್ಥಳೀಯೇತರ ವೃಂದದಲ್ಲಿ 4 ಜನರು ಸೇರಿದಂತೆ ಒಟ್ಟು 42 ಜನರನ್ನು ಶಿರಸ್ತೇದಾರ ಮತ್ತು ಉಪ ತಹಶೀಲ್ದಾರ್ ಹುದ್ದೆಗಳಿಗೆ ಪದೋನ್ನತಿ ನೀಡಲು ಅನುಮೋದನೆ ನೀಡಿದ್ದಾರೆ. ಅಲ್ಲದೇ, ಮುಂಬಡ್ತಿ ಹೊಂದಿರುವ ನೌಕರರನ್ನು ನಿಯುಕ್ತಿಗೊಳಿಸಲಾದ ಕಚೇರಿಗೆ ಹಾಜರಾಗಲು ಸಂಬಂಧಿಸಿದ ಕಚೇರಿಗಳ ಮುಖ್ಯಸ್ಥರು ಕೂಡಲೇ ಬಿಡುಗಡೆಗೊಳಿಸುವಂತೆ ಸೂಚಿಸಿದ್ದಾರೆ.