ಕಲಬುರಗಿ: ರಾಷ್ಟ್ರೀಯ ಮೆಗಾ ಲೋಕ ಅದಾಲತ್ ಅಂಗವಾಗಿ ಹೈಕೋರ್ಟ್ ಪೀಠದಲ್ಲಿ ವಿಮಾ ಪ್ರಕರಣ, ರಸ್ತೆ ಅಪಘಾತ, ಕೌಟುಂಬಿಕ, ಸಿವಿಲ್ ಸೇರಿದಂತೆ ಇನ್ನಿತರ ಪ್ರಕರಣಗಳನ್ನು ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಾಲಯವು ರಾಜಿ ಸಂಧಾನದ ಮೂಲಕ 327 ಪ್ರಕರಣಗಳನ್ನು ಇತ್ಯರ್ಥಪಡಿಸಿ, 6.41 ಕೋಟಿ ರೂ. ಗಳ ಪರಿಹಾರ ಮೊತ್ತ ಪಾವತಿಸುವಂತೆ ಆದೇಶ ಹೊರಡಿಸಿದೆ.
ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ, ನ್ಯಾಯಮೂರ್ತಿ ಅಶೋಕ ಜಿ. ನಿಜಗಣ್ಣನವರ್ ಹಾಗೂ ನ್ಯಾಯಮೂರ್ತಿ ಶ್ಯಾಮ್ ಪ್ರಸಾದ್ ಅವರುಗಳಿದ್ದ ಪೀಠವು ಪ್ರತ್ಯೇಕವಾಗಿ ಪ್ರಕರಣಗಳ ವಿಚಾರಣೆ ನಡೆಸಿ ತೀರ್ಪು ನೀಡಿತು. ರಾಷ್ಟ್ರೀಯ ಲೋಕ ಅದಾಲತ್ ನಿಮಿತ್ತ ಕಳೆದ ಜುಲೈ 1ರಿಂದ ಪ್ರಕರಣಗಳ ವಿಚಾರಣೆ ನಡೆಸಿದ್ದ ನ್ಯಾಯಾಧೀಶರು ಇಂದು ಅಂತಿಮವಾಗಿ ಆದೇಶ ಪ್ರಕಟಿಸಿದರು.
ಲೋಕ ಅದಾಲತ್‍ನಲ್ಲಿ ದಾಖಲಾದ ಒಟ್ಟಾರೆ 452 ಪ್ರಕರಣಗಳನ್ನು ವಿಚಾರಣೆಗೆ ಕೈಗೆತ್ತಿಕೊಂಡು, 327 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ. ಇದರಲ್ಲಿ ವಾಹನ ಅಪಘಾತದ 321 ಪ್ರಕರಣಗಳಲ್ಲಿ 6,41,51,610 ರೂ. ಪರಿಹಾರ ಮೊತ್ತ ಪಾವತಿಸುವಂತೆ ಸಂಬಂಧಿಸಿದ ವಿಮಾ ಸಂಸ್ಥೆಗಳಿಗೆ ಆದೇಶ ಮಾಡಿದೆ. 3 ಸಿವಿಲ್ ಪ್ರಕರಣಗಳು, 1 ರಿಟ್ ಪಿಟಿಷನ್ ಕೇಸ್ ಹಾಗೂ 2 ವಿಚ್ಚೇಧನ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಿ ಸತಿ-ಪತಿಗಳನ್ನು ನ್ಯಾಯಾಲಯವು ಒಂದು ಮಾಡಿದೆ.
ದಾಖಲೆ ಪ್ರಮಾಣದಲ್ಲಿ ಪ್ರಕರಣಗಳ ಇತ್ಯರ್ಥ:
ಅದಾಲತ್‍ನಲ್ಲಿ ದಾಖಲಾದ ಪ್ರಕರಣಗಳ ಕುರಿತು ತೀರ್ಪು ನೀಡುವ ಮುನ್ನ ವಕೀಲರು ಮತ್ತು ಕಕ್ಷಿದಾರರನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ, ಲೋಕ ಅದಾಲತ್ ಅಂಗವಾಗಿ ಕಲಬುರಗಿ ಪೀಠದಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ಎರಡು ಪಟ್ಟು ಹೆಚ್ಚಿನ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ ಎಂದರು.
ರಾಜಿ ಸಂಧಾನ ಮೂಲಕ ಶೀಘ್ರವಾಗಿ ನ್ಯಾಯ ಒದಗಿಸುವುದೇ ಮೆಗಾ ಲೋಕ ಅದಾಲತ್ ಮುಖ್ಯ ಉದ್ದೇಶವಾಗಿದೆ. ತಾವು ಕಳೆದ ಆರೂವರೆ ವರ್ಷದಿಂದ ಈ ಪೀಠದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ವರ್ಷದಿಂದ ವರ್ಷಕ್ಕೆ ಇಲ್ಲಿ ರಾಜಿ ಸಂಧಾನದ ಇತ್ಯರ್ಥಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣ ದಾಖಲಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಹೇಳಿದ ನ್ಯಾಯಮೂರ್ತಿಗಳು ಮೆಗಾ ಅದಾಲತ್‍ಗೆ ಸಹಕಾರ ನೀಡಿದ ನ್ಯಾಯವಾದಿಗಳಿಗೆ ಮತ್ತು ಕಕ್ಷಿದಾರರಿಗೆ ಅಭಾರಿಯಾಗಿದ್ದೇನೆ ಎಂದರು.
ಉಚ್ಚ ನ್ಯಾಯಾಲಯದ ಹೆಚ್ಚುವರಿ ರಿಜಿಸ್ಟ್ರಾರ್ ಜನರಲ್ ಕೆ.ವಿ.ಅಸೋಡೆ, ನ್ಯಾಯಿಕ ರಿಜಿಸ್ಟ್ರಾರ್ ಶ್ರೀನಿವಾಸ ಸುವರ್ಣಾ, ಕಲಬುರಗಿ ಹೈಕೋರ್ಟ್ ಪೀಠದ ಕಾನೂನು ಸೇವಾ ಸಮಿತಿಯ ಕಾರ್ಯದರ್ಶಿ ಗೋಮತಿ ರಾಘವೇಂದ್ರ, ಹೈಕೋರ್ಟ್ ಘಟಕದ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಅರುಣ ಕುಮಾರ ಕಿಣ್ಣಿ ಸೇರಿದಂತೆ ಅನೇಕರು ಈ ಮೆಗಾ ಲೋಕ ಅದಾಲತ್‍ನಲ್ಲಿ ಭಾಗವಹಿಸಿದ್ದರು.