ಕಲಬುರಗಿ: ಸಹಾಯಕ ಪ್ರಾಧ್ಯಾಪಕನೊಬ್ಬ ಕಾಲೇಜಿನ ಪ್ರಾಂಶುಪಾಲರ ಮೇಲೆ ಎರಚಲು ಯತ್ನಿಸಿದ್ದಲ್ಲದೆ, ಹಲ್ಲೆಗೂ ಮುಂದಾದ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ. ಮಾ.21ರಂದು ಪ್ರತಿಷ್ಠಿತ ಹೆಚ್‌ಕೆಇ ಸೊಸೈಟಿಯ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ.ಅರುಣ್ ಕುಮಾರ್ ಬೆನಕಳ ಅವರ ಮೇಲೆ ಆ್ಯಸಿಡ್ ಎರಚಲು ಹಾಗೂ ಹಲ್ಲೆ ನಡೆಸಲು ಯತ್ನಿಸಲಾಗಿದೆ ಎನ್ನಲಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಫಾರ್ಮಸಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕನಾಗಿರುವ ಶಾಂತವೀರ ಸಲಗಾರ ಎಂಬಾತ ಆ್ಯಸಿಡ್ ಎರಚಲು ಯತ್ನಿಸಿದ್ದಾರೆ ಎಂದು ದೂರು ದಾಖಲಾಗಿದೆ. ಶಾಂತವೀರ ಪರೀವಿಕ್ಷಣಾ ಇನ್ಸ್ಪೆಕ್ಟರ್ ಆಗಿ ನೇಮಕವಾಗಬೇಕಾಗಿತ್ತು. ಆದರೆ, ಪ್ರಿನ್ಸಿಪಾಲ್ ಅರುಣ್ ಕುಮಾರ್ ತಮ್ಮ ಕೈವಾಡದಿಂದ ತನಗೆ ಹುದ್ದೆ ತಪ್ಪಿದೆ ಎಂದು ಆಕ್ರೋಶಗೊಂಡು ಶಾಂತವೀರ ಎಸಿಡ್ ದಾಳಿ ನಡೆಸಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಹೆಚ್‌ಕೆಇ ಫಾರ್ಮಸಿ ಕಾಲೇಜು ಆವರಣದಲ್ಲಿಯೇ ಆ್ಯಸಿಡ್ ಎರಚಲು ಮುಂದಾಗಿದ್ದ ಶಾಂತವೀರ, ಅವಾಚ್ಯ ಶಬ್ದಗಳಿಂದ ಪ್ರಾಂಶುಪಾಲರನ್ನು ನಿಂದಿಸಿ ಹಲ್ಲೆಗೆ ಯತ್ನಿಸಿದ್ದಾರೆ. ಅಲ್ಲದೇ, ತನ್ನ ಕಾರಿನಿಂದ ಡಿಕ್ಕಿ ಹೊಡೆದು ಅಪಘಾತಕ್ಕೆ ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ವೇಳೆ ಕೆಲ ಪ್ರಾಧ್ಯಾಪಕರು ಪ್ರಾಂಶುಪಾಲರನ್ನು ರಕ್ಷಣೆ ಮಾಡಿ ಮನೆಗೆ ಸುರಕ್ಷಿತವಾಗಿ ತಲುಪಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ಕುರಿತು ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಮದುವೆ ಸಮಾರಂಭದಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿದ ಮಾಜಿ ಸೈನಿಕ.. ಆತಂಕಕ್ಕೊಳಗಾದ ಜನ!