ಸೇಡಂ: ತಾಲೂಕಿನಲ್ಲಿ ಬುಧವಾರ ಸಂಜೆ ಭಾರಿ ಮಳೆಯಾಗಿದೆ ಪರಿಣಾಮ ತಾಲೂಕಿನ ಬಟಗೇರಾ ಗ್ರಾಮದ ಸಮೀಪದಲ್ಲಿರುವ 220 ಕೆ.ವಿ ವಿದ್ಯುತ್ ಸಬ್ ಸ್ಟೇಷನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಷ್ಟೇ ಅಲ್ಲದೆ ಪಟ್ಟಣದ ಪೊಲೀಸ್ ಠಾಣೆಗೆ ನೀರು ನುಗ್ಗಿದ್ದು ಅವಾಂತರ ಸೃಷ್ಟಿಯಾಗಿದೆ.
ಮಳೆ ವಿಪರೀತವಾಗಿ ಏರಿಕೆ ಕಂಡಾಗ ಹಠಾತ್ತನೇ ಇದಕಿದ್ದಂತೆ ಬಾಂಬ್ ಸಿಡಿದಂತೆ ಶಬ್ದ ಉಂಟಾಗಿದೆ. ನಂತರ ಬೃಹತ್ ಗಾತ್ರದಲ್ಲಿ ಬಟಗೇರಾದ ವಿದ್ಯುತ್ ಪರಿವರ್ತಕಗಳಿಗೆ ಬೆಂಕಿ ತಗುಲಿರುವುದು ಕಂಡು ಬಂದಿದೆ. ಭಾರಿ ಮಳೆಯ ನಡುವೆಯೂ ನಿರಂತರ 40 ನಿಮಿಷಗಳ ಕಾಲ ಬೆಂಕಿ ಹತ್ತಿ ಉರಿದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮೊಳಕಾಲೆತ್ತರಕ್ಕೆ ನೀರು ಜಮಾವಣೆಯಾಗಿದ್ದು, ರಕ್ಷಿಸುವವರೇ ಸಂಕಷ್ಟದಲ್ಲಿ ಸಿಲುಕಿದಂತಾಗಿದೆ. ಠಾಣೆಯಲ್ಲಿನ ಪೀಠೋಪಕರಣ, ದಸ್ತಾವೇಜುಗಳನ್ನು ಕಾಪಾಡಲು ಪೊಲೀಸರು ಹರಸಾಹಸ ಪಡುತ್ತಿರುವ ದೃಶ್ಯ ಕಂಡುಬಂದಿದೆ. ಅಲ್ಲದೆ ದೊಡ್ಡ ಅಗಸಿ, ವೆಂಕಟೇಶ್ವರ ನಗರ, ವಿದ್ಯಾನಗರ, ಗಣೇಶ ನಗರ, ಸಣ್ಣ ಅಗಸಿ, ಕೋಡ್ಲಾ ಕ್ರಾಸ್, ಅಗ್ಗಿ ಬಸವೇಶ್ವರ ಕಾಲೊನಿ, ಚೋಟಿಗಿರಣಿ ಬಡಾವಣೆಗಳ ರಸ್ತೆಗಳಲ್ಲಿ ಪಾದದೆತ್ತರಕ್ಕೆ ನೀರು ಜಮಾವಣೆಯಾಗಿದೆ.