ಕಲಬುರಗಿ: ಮೌಢ್ಯ ನಂಬಿಕೆ ಹೋಗಲಾಡಿಸುವ ಉದ್ದೇಶದಿಂದ ನಾಗರ ಪಂಚಮಿಯನ್ನು ಬಸವ ಪಂಚಮಿಯಾಗಿ ಅಲೆಮಾರಿ ಬಡ ಹಾಗೂ ಅಪೌಷ್ಟಿಕತೆ ಇರುವ ಮಕ್ಕಳಿಗೆ ಹಾಲು ವಿತರಿಸುವ ಮೂಲಕ ವಿಶೇಷ ಹಾಗೂ ವಿನೂತನವಾಗಿ ಆಚರಿಸಲಾಯಿತು.
ಮಾನವ ಬಂದುತ್ವ ವೇದಿಕೆ ಹಾಗೂ ವಿದ್ಯಾರ್ಥಿ ಬಂದುತ್ವ ವೇದಿಕೆ ನೇತೃತ್ವದಲ್ಲಿ ನಗರದ ನೃಪತುಂಗ ಕಾಲೋನಿಯ ಅಲೆಮಾರಿ ಜನಾಂಗದ ಕೇರಿಯಲ್ಲಿ ಮಕ್ಕಳಿಗೆ ಹಾಲು, ಪಾಯಸಾ ವಿತರಿಸುವ ಮೂಲಕ ವಿನೂತನವಾಗಿ ಆಚರಿಸಲಾಯಿತು. ವೈಜ್ಞಾನಿಕವಾಗಿ ಹಾವು ಹಾಲು ಸೇವಿಸುವುದಿಲ್ಲ. ಹುತ್ತಕ್ಕೆ ಹಾಲೆರೆಯುವುದುರಿಂದ ಅಪಾರ ಹಾಲು ಮಣ್ಣು ಪಾಲಾಗುತ್ತದೆ ಆದರಿಂದ ಬಸವ ಪಂಚಮಿ ದಿನ ಹಾಲು ಹಾಳು ಮಾಡುವ ಬದಲಿಗೆ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಹಾಲು ಕುಡಿಸುವುದು ಒಂದು ಮಾದರಿ ಕಾರ್ಯ ಎಂದು ಪ್ರಗತಿಪರ ಚಿತಂಕ ಶಿವರಂಜನ್ ಸತ್ಯಂಪೇಟ್ ಅಭಿಪ್ರಾಯಪಟ್ಟರು.
ಮಾನವ ಬಂದುತ್ವ ವೇದಿಕೆ ಸಂಸ್ಥಾಪಕ ಅಧ್ಯಕ್ಷರಾದ ಸತೀಶ ಜಾರಕಿಹೊಳಿ ಮೂಢನಂಬಿಕೆ ಹೋಗಲಾಡಿಸುವ ನಿಟ್ಟಿನಲ್ಲಿ ರಾಜಾದ್ಯಂತ ವೈಚಾರಿಕವಾಗಿ ಬಸವ ಪಂಚಮಿ ಹಾಗೂ ಮಕ್ಕಳ ಪಂಚಮಿಯಾಗಿ ಆಚರಿಸಲು ಕರೆ ಕೊಟ್ಟಿದ್ದಾರೆ. ಈ ಹಿನ್ನಲೆ ಕಲಬುರಗಿಯಲ್ಲಿ ಅಲೆಮಾರಿ ಜನಾಂಗದ ಬಡಾವಣೆಯಲ್ಲಿ ಬಸವ ಪಂಚಮಿಯನ್ನು ಹಾಲು ವಿತರಿಸುವ ಮೂಲಕ ವೈಚಾರಿಕವಾಗಿ ಆಚರಿಸಲಾಗುತ್ತಿದೆ. ಹಾಲು ಕುಡಿಯದ ಹಾವಿಗೆ ಹಾಲು ಕುಡಿಸುವ ಬದಲಿಗೆ ಅಪೌಷ್ಟಿಕತೆ ಹೊಂದಿರುವ ಮಕ್ಕಳಿಗೆ ಹಾಲು ವಿತರಿಸುವ ಮೂಲಕ ವೈಚಾರಿಕವಾಗಿ ಆಚರಿಸಲಾಗುತ್ತಿದೆ ಎಂದು ವಿದ್ಯಾರ್ಥಿ ಬಂದುತ್ವ ವೇದಿಕೆ ಜಿಲ್ಲಾಧ್ಯಕ್ಷ ದಿನೇಶ್ ದೊಡ್ಮನಿ ತಿಳಿಸಿದರು.