ಕಲಬುರಗಿ: ಜಿಲ್ಲೆಯಲ್ಲಿ ಮಳೆರಾಯ ಬಿಟ್ಟೂ ಬಿಡದೆ ಸುರಿದು ರೈತರಿಗೆ ಕಾಟ ಕೊಡುತ್ತಿದ್ದಾನೆ. ನಿರಂತರವಾಗಿ ಸುರಿಯುತ್ತಿರುವ ಜಿಟಿಜಿಟಿ ವರ್ಷಧಾರೆ ಅನ್ನದಾತನ ಬದುಕಿನ ಬೆಳೆಯನ್ನು ಬರ್ಬಾದ್ ಮಾಡಿದೆ. ಕಟಾವಿಗೆ ಬಂದಿರುವ ಫಸಲು ಗಿಡದಲ್ಲಿಯೇ ಮೊಳಕೆ ಒಡೆಯುತ್ತಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಮೇಘರಾಜನ ಅಬ್ಬರ ಹೆಚ್ಚಾಗಿದೆ. ನಿರಂತರವಾಗಿ ಸುರಿಯುತ್ತಿರುವ ಜಡಿ ಮಳೆಗೆ ರೈತರ ಬೆಳೆ ಹಾನಿಯಾಗಿದೆ. ಅಪಾರ ಪ್ರಮಾಣದ ಮಳೆ ನೀರು ರೈತರ ಜಮೀನಿನಲ್ಲಿ ಶೇಖರಣೆಯಾಗಿ ಬೆಳೆ ಕೊಳೆಯುತ್ತಿದೆ. ಭರಪೂರ ಫಸಲು ತುಂಬಿಕೊಂಡು ನಳನಳಿಸುತ್ತಾ ಕಟಾವಿಗೆ ಬಂದಿರುವ ಉದ್ದು, ಹೆಸರು ಬೆಳೆಗಳು ಶೇ 90% ರಷ್ಟು ನಾಶವಾಗಿವೆ ಎನ್ನಲಾಗುತ್ತಿದೆ.
ಜಡಿ ಮಳೆಯಿಂದಾಗಿ ಕಟಾವಿಗೆ ಬಂದಿರುವ ಫಸಲು ರಾಶಿ ಮಾಡಲು ಸಾಧ್ಯವಾಗದ ಸ್ಥಿತಿಯಿದೆ. ಕಳೆದ ಇಪ್ಪತ್ತು ದಿನಗಳ ಹಿಂದೆ ಎರಡು ದಿನ ಸುರಿದ ಧಾರಾಕಾರ ಮಳೆಗೆ ಬಹುತೇಕ ಬೆಳೆ, ಫಲವತ್ತಾದ ಮಣ್ಣು ಕೂಡ ಕೊಚ್ಚಿ ಹೋಗಿತ್ತಂತೆ. ಕೃಷಿ ಭೂಮಿ ಇಲ್ಲದೆ ಹೊಟ್ಟೆಪಾಡಿಗಾಗಿ ದುಡಿಯಲು ಮಹಾನಗರಗಳಿಗೆ ಗುಳೆ ಹೋಗಿದ್ದ ಜನರು ಲಾಕ್‌ಡೌನ್‌ನಿಂದ ತಮ್ಮೂರುಗಳಿಗೆ ಆಗಮಿಸಿದ್ದರು. ಹೀಗೆ ಬಂದವರು ಕೈಯಲ್ಲಿ ಕೆಲಸ ಇಲ್ಲದೆ ಸಾಲ ಮಾಡಿಕೊಂಡು ಬೇರೆಯವರ ಜಮೀನು ಅಡ (ಲೀಸ್) ಹಾಕಿಕೊಂಡು ಕೃಷಿ ಮಾಡಿದ್ದಾರೆ.
ಕೃಷಿ ಇಲಾಖೆ ಅಂದಾಜಿನ ಪ್ರಕಾರ, ಜಿಲ್ಲೆಯಲ್ಲಿ ಸುಮಾರು 30 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಉದ್ದು, ಹೆಸರು, ಶೇಂಗಾ, ಎಳ್ಳು, ತೊಗರಿ, ಸೂರ್ಯಕಾಂತಿ ಹೀಗೆ ಮುಂಗಾರು ಬೆಳೆ ಹಾನಿಯಾಗಿದೆ. ರೈತರಿಗೆ ಆದಾಯ ತಂದು ಕೊಡುವ ಮುಂಗಾರು ಬೆಳೆ ಹಾಳಾಗಿದ್ರಿಂದ ಅನ್ನದಾತರು ಅಕ್ಷರಶಃ ಕಂಗಾಲಾಗಿದ್ದಾರೆ. ಎಕರೆಗೆ 10-12 ಸಾವಿರ ರೂ ಖರ್ಚು ಮಾಡಿರುವ ರೈತರು ಸಾಲದ ಸುಳಿಯಲ್ಲಿ ಸಿಲುಕಿ ಒದ್ದಾಟ ನಡೆಸುತ್ತಿದ್ದಾರೆ. ಬೆಳೆ ಪರಿಹಾರಕ್ಕಾಗಿ ರೈತರು ಸರ್ಕಾರದತ್ತ ಮುಖ ಮಾಡಿದ್ದಾರೆ.