ಧಾರವಾಡ : ಮಹದಾಯಿ ವಿವಾದ ನ್ಯಾಯಾಧಿಕರಣದಲ್ಲಿರುವುದರಿಂದ ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಬೇಕು ಅಂತಾ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಸಿಎಂ ಕುಮಾರಸ್ವಾಮಿ ಹಾಗೂ ಸಚಿವ ಡಿ ಕೆ ಶಿವಕುಮಾರ್ ದೆಹಲಿಯಲ್ಲಿ ನನ್ನ ಭೇಟಿಯಾಗಲು ಆಗಮಿಸಿದ್ದರು. ಕಾನೂನು ತಜ್ಞರೊಂದಿಗೆ ಮತ್ತೊಮ್ಮೆ ದೆಹಲಿಗೆ ಬನ್ನಿ ಅಂತಾ ಹೇಳಿರುವೆ.
ನ್ಯಾಯಾಧೀಕರಣದಲ್ಲಿ ವಿವಾದ ಬಗೆಹರಿಯಬೇಕಾಗಿರುವುದರಿಂದ ಕಾನೂನು ತಜ್ಞರೊಂದಿಗೆ ಸಮಾಲೋಚನೆ ಆಗಬೇಕು. ಮತ್ತೊಮ್ಮೆ ಸಿಎಂ ಹೆಚ್‌ಡಿಕೆ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಅವರು ಬಂದಾಗ, ಕೇಂದ್ರ ಜಲಸಂಪನ್ಮೂಲ ಸಚಿವರನ್ನು ಭೇಟಿಯಾಗುತ್ತೇವೆ. ಕೇಂದ್ರ ಸಚಿವರ ಮುಂದೆ ವಿವಾದ ಇತ್ಯರ್ಥಕ್ಕೆ ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಮಧ್ಯಂತರ ಚುನಾವಣೆ ಕುರಿತು ಮಾಜಿ ಪ್ರಧಾನಿ ದೇವೇಗೌಡರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ರಾಜ್ಯ ಸರ್ಕಾರ ಸಂಪೂರ್ಣ ಗೊಂದಲದಲ್ಲಿದೆ. ಒಬ್ಬರಿಗೊಬ್ಬರು ಕಾಲೆಳೆಯುವ ಕೆಲಸ ಮಾಡುತ್ತಿದ್ದಾರೆ. ಇದರ ಭಾಗವಾಗಿಯೇ ದೇವೇಗೌಡರು ಆ ರೀತಿ ಹೇಳಿದ್ದಾರೆ. ಜನರ ಹಿತ ಮರೆತು ಇವರೆಲ್ಲ ರಾಜಕೀಯ ಚದುರಂಗದಾಟ ಆಡುತ್ತಿದ್ದಾರೆ.
ಆ ಆಟದಲ್ಲಿ ಈಗ ದೇವೇಗೌಡರು ಚೆಕ್‌ಮೇಟ್ ಕೊಟ್ಟಿದ್ದಾರೆ. ದೇವೇಗೌಡರು ಕೊಟ್ಟ ಚೆಕ್ಮೇಟ್ಗೆ ಸಿದ್ಧರಾಮಯ್ಯ ಏನ್ ಆಟಾ ಆಡ್ತಾರೆ ನೋಡಬೇಕಿದೆ. ಸಿದ್ಧರಾಮಯ್ಯನವರ ಆಟದ ಮೇಲೆ ಎಲ್ಲಾ ನಿಂತಿದೆ. ಮುಂದೇನಾಗುತ್ತೋ ನೋಡೋಣ ಎಂದು ಜೋಶಿ ಹೇಳಿದರು.