ಹುಬ್ಬಳ್ಳಿ: ಯುಪಿಎಸ್‌ಸಿ ಪರೀಕ್ಷೆಯಲ್ಲಿ 354ನೇ ರ‍್ಯಾಂಕ್ ಗಳಿಸಿದ ಮೇಘಾ ಜೈನ್ ಪರಿಶ್ರಮಕ್ಕೆ ಕೊನೆಗೂ ಫಲ ದೊರೆತಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಧಾರವಾಡ ಜಿಲ್ಲೆಯ ನವಲಗುಂದದ ಮೇಘಾ ಜೈನ್ ಮಾತನಾಡಿ, ಯುಪಿಎಸ್‌ಸಿ ಪರೀಕ್ಷೆ ಪಾಸಾಗುವುದಕ್ಕಾಗಿ ಸಾಫ್ಟ್‌ವೇರ್ ಕಂಪನಿಯ ಕೆಲಸ ಬಿಟ್ಟು ಬಂದಿದ್ದೆ. ಪರಿಶ್ರಮಕ್ಕೆ ಕೊನೆಗೂ ಫಲ ದೊರೆತಿದೆ. ನಿತ್ಯವೂ 10 ತಾಸು ಅಧ್ಯಯನ ಮಾಡುತ್ತಿದ್ದೆ. ಐದನೇ ಬಾರಿಗೆ ಯಶಸ್ಸು ದೊರೆತಿದ್ದು, ಖುಷಿಯಾಗಿದೆ. ಪೋಷಕರ ಪ್ರೋತ್ಸಾಹದಿಂದ ಇದು ಸಾಧ್ಯವಾಗಿದೆ. ಜೊತೆಗೆ ಪರಿಶ್ರಮದಿಂದ ಮಾತ್ರ ಸಾಧನೆ ಸಾಧ್ಯ ಎಂದು ಹೇಳಿದರು.
ನವಲಗುಂದದ ರೋಟರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಲಯನ್ಸ್ ಶಾಲೆಯಲ್ಲಿ ಪ್ರೌಢ ಶಿಕ್ಷಣ, ಹುಬ್ಬಳ್ಳಿಯ ಪಿ.ಸಿ. ಜಾಬಿನ್ ಕಾಲೇಜಿನಲ್ಲಿ ಪಿಯುಸಿ ಹಾಗೂ ಬಿವಿಬಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿಇ ಪದವಿ ಪಡೆದಿದ್ದಾರೆ.
ಇದನ್ನೂ ಓದಿ: ಬಿಎಸ್ವೈ ರಾಜ್ಯ ಪ್ರವಾಸಕ್ಕೆ ಯಾವುದೇ ತೊಂದರೆಯಿಲ್ಲ: ಸಿಎಂ ಬೊಮ್ಮಾಯಿ
ಮೇಘಾ ಅವರ ತಂದೆ ಮನೋಜ್ ಪಾರಸಮಲ್ ಜೈನ್ ಅವರು ನವಲಗುಂದದಲ್ಲಿ ಮೆಡಿಕಲ್ ಶಾಪ್ ಹೊಂದಿದ್ದಾರೆ. ಮಗಳ ಸಾಧನೆಗೆ ಕುಟುಂಬಸ್ಥರು ಸಂತಸಗೊಂಡಿದ್ದಾರೆ. ನಮ್ಮ ಮಗಳ ನಿರಂತರ ಪ್ರಯತ್ನಕ್ಕೆ ಫಲ ಸಿಕ್ಕಿದೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ. ಮೇಘಾ ಸಾಧನೆಗೆ ಅವರ ಸಂಬಂಧಿಗಳು, ನವಲವಗುಂದ ಹಾಗೂ ಹುಬ್ಬಳ್ಳಿ ಜನರು ಶುಭವಾಗಲಿ ಎಂದು ಹಾರೈಸಿದ್ದಾರೆ.