ಹುಬ್ಬಳ್ಳಿ: ಅಡ್ಡಾದಿಡ್ಡಿ ಓಡಾಡುವ ವಾಹನಗಳಿಗೆ ದಂಡ ಹಾಕಬೇಕಾದ ಪೊಲೀಸರೇ ಇಲಾಖೆಯ ವಾಹನವನ್ನು ಕುಡಿದ ಮತ್ತಿನಲ್ಲಿ ಬ್ಯಾರಿಕೇಡ್ಗೆ ಗುದ್ದಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪೊಲೀಸರನ್ನು ಅಮಾನತು ಮಾಡಲಾಗಿದೆ.
ಹುಬ್ಬಳ್ಳಿ-ಧಾರವಾಡ ಉತ್ತರ ಸಂಚಾರಿ ಠಾಣೆಯ ಎಎಸ್ಐ ಉದಯ ದೊಡ್ಡಮನಿ ಹಾಗೂ ಸಶಸ್ತ್ರ ಮೀಸಲು ಪಡೆಯ ಮುತ್ತು ಮಾಗಿ ಅಮಾನತಾದ ಪೊಲೀಸರು. ಹೋಳಿ ಹಬ್ಬದ ದಿನದಂದು ಭದ್ರತೆ ನೀಡುವ ನಿಟ್ಟಿನಲ್ಲಿ ವಾಣಿಜ್ಯ ನಗರಿಯಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಆ ದಿನ ಕರ್ತವ್ಯ ನಿರ್ವಹಣೆ ಬಳಿಕ ಮುತ್ತು ಮಾಗಿ, ಉದಯ ದೊಡ್ಡಮನಿ ಹೈವೇ ಪೆಟ್ರೋಲಿಂಗ್ ವಾಹನವನ್ನು ತೆಗೆದುಕೊಂಡು ನಗರದ ಹೊರವಲಯಕ್ಕೆ ತೆರಳಿದ್ದರು.
ಈ ವೇಳೆ ವಾಹನ ಚಲಾಯಿಸುತ್ತಿದ್ದ ಮುತ್ತುಮಾಗಿ ಕುಡಿದ ಮತ್ತಿನಲ್ಲಿ ವಾಹನವನ್ನು ಬ್ಯಾರಿಕೇಡ್ಗೆ ಗುದ್ದಿದ್ದ. ಇದರಿಂದ ಮುತ್ತುಮಾಗಿ ಮತ್ತು ಉದಯ್ ದೊಡ್ಡಮನಿ ಗಂಭೀರ ಗಾಯಗೊಂಡಿದ್ದರು. ಘಟನೆಯ ಬಳಿಕ ತನಿಖೆ ನಡೆಸಿದ ಪೊಲೀಸ್ ಅಧಿಕಾರಿಗಳು, ಈ ಇಬ್ಬರು ಪೊಲೀಸರು ಕರ್ತವ್ಯಲೋಪ ಎಸಗಿದ್ದು ಗೊತ್ತಾಗಿದೆ. ಇದರಿಂದಾಗಿ ಇಬ್ಬರನ್ನೂ ಅಮಾನತು ಮಾಡಿ ಹು-ಧಾ ಪೋಲಿಸ್ ಆಯುಕ್ತ ಲಾಬೂರಾಮ್ ಆದೇಶ ಹೊರಡಿಸಿದ್ದಾರೆ.