ಹುಬ್ಬಳ್ಳಿ: ವಿಶ್ವದ ಅತಿದೊಡ್ಡ ರೈಲ್ವೆ ಪ್ಲಾಟ್ ಫಾರಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ನೈಋತ್ಯ ರೈಲ್ವೆ ವಲಯದಲ್ಲಿ ಸಾರ್ವಜನಿಕರು ಪರದಾಡುವಂತಾಗಿದೆ. ನಿಗದಿತ ಸಮಯಕ್ಕಿಂತ ರೈಲುಗಳು ತಡವಾಗಿ ಆಗಮಿಸುತ್ತಿವೆ. ಕೆಲಸ ಕಾರ್ಯಗಳಿಗೆ ಹೋಗಲು ಸಾಕಷ್ಟು ಸಮಸ್ಯೆ ಉಂಟಾಗುತ್ತಿದ್ದು, ಜನರು ಪ್ರಯಾಣದ ಸಮಯಕ್ಕಿಂತ ಹೆಚ್ಚಾಗಿ ಮಾರ್ಗಮಧ್ಯದಲ್ಲಿ ಕಾಯುವಂತ ಸ್ಥಿತಿ ನಿರ್ಮಾಣವಾಗಿದೆ.
ನೈಋತ್ಯ ರೈಲ್ವೆ ವಲಯದಲ್ಲಿ ಮಾತ್ರವಲ್ಲದೇ ಬೆಂಗಳೂರು, ಮೈಸೂರು ವಿಭಾಗದಲ್ಲಿ ಕೂಡ ದ್ವಿಪಥ(ಡಬ್ಲಿಂಗ್), ಇಂಟರ್ ಲಾಕ್, ವಿದ್ಯುದೀಕರಣ ಕಾಮಗಾರಿ ಸೇರಿದಂತೆ ವಿವಿಧ ಕಾಮಗಾರಿಯಿಂದ ಬಹುತೇಕ ರೈಲು ಸಂಚಾರ ನಿಗದಿತ ಮಿತಿಗಿಂತ ತಡವಾಗಿ ಆಗಮಿಸುವ ಹಾಗೂ ನಿರ್ಗಮಿಸುವ ಮೂಲಕ ಪ್ರಯಾಣಿಕರು ಸಮಸ್ಯೆ ಅನುಭವಿಸುವಂತಾಗಿದೆ. ಯಾವುದೇ ತುರ್ತು ಕಾರ್ಯವನ್ನು ಇಟ್ಟುಕೊಂಡು ರೈಲ್ವೆಗೆ ಬಂದರೇ ಬಹುತೇಕ ಸಮಯ ಪ್ರಯಾಣದಲ್ಲಿಯೇ ಹೋಗುವಂತಾಗಿದ್ದು, ಜನಪ್ರಿಯತೆ ಪಡೆದುಕೊಂಡಿದ್ದ ಸೇವೆ ಕಾಮಗಾರಿಯಿಂದ ಜನರ ಅಸಮಾಧಾನಕ್ಕೆ ಕಾರಣವಾಗಿದೆ.
ಈಗಾಗಲೇ ಸಾಕಷ್ಟು ಕಾಮಗಾರಿ ಚುರುಕುಗೊಂಡಿದ್ದು, ರೈಲ್ವೆ ಸ್ಪೀಡ್ ಹೆಚ್ಚಿಸುವ ಮೂಲಕ ಸಾರ್ವಜನಿಕರ ಸಮಸ್ಯೆಗಳ ಜೊತೆಗೆ ರೈಲ್ವೆ ವಲಯದಲ್ಲಿ ಸಮಯಕ್ಕೆ ಆದ್ಯತೆ ನೀಡಲು ಚಿಂತನೆ ನಡೆಸಿದ್ದೇವೆ ಎನ್ನುತ್ತಾರೆ ರೈಲ್ವೆ ಅಧಿಕಾರಿಗಳು. ಆದರೆ, ಸಾರ್ವಜನಿಕರಿಗೆ ಸರಿಯಾದ ಮಾಹಿತಿ ಇಲ್ಲದೇ ಮತ್ತಷ್ಟು ಸಮಸ್ಯೆ ಎದುರಿಸುವಂತಾಗಿದೆ.