ಧಾರವಾಡ: ಟಿಪ್ಪು ಸ್ವಾತಂತ್ರ್ಯ ಪ್ರೇಮಿ, ಕನ್ನಡದ ಅಭಿಮಾನಿ. ಸ್ವಾಭಿಮಾನದಿಂದ ಆಡಳಿತ ನೀಡಿದವನು. ತಂತ್ರಜ್ಞಾನ, ವಿಜ್ಞಾನವನ್ನು ಅಂದಿನ ಸಂದರ್ಭದಲ್ಲೇ ಹೆಚ್ಚು ಅರಿತವರು ಎಂದು ಧಾರವಾಡದಲ್ಲಿ ಮಾಜಿ ಸಚಿವ ಹೆಚ್.ಕೆ.ಪಾಟೀಲ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಪಠ್ಯ ಪುಸ್ತಕದಲ್ಲಿ ಟಿಪ್ಪು ಅಧ್ಯಾಯ ಕೈಬಿಡುವ ಕುರಿತು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು. ಟಿಪ್ಪು ಇತಿಹಾಸ ಬಹು ದೊಡ್ಡದು. ತನ್ನದೇಯಾದ ನಾಡು ಕಟ್ಟಿ ಬೆಳೆಸುವಾಗ ಕೆಲ ವಿವಾದಗಳು ಆಗಿರಬಹುದು. ಆದರೆ ರಾಜಕೀಯ ಕಾರಣಕ್ಕಾಗಿ ಬಿಜೆಪಿ ಟಿಪ್ಪು ಬಗ್ಗೆ ತೆಗೆದುಕೊಂಡ ನಿರ್ಣಯ ಖಂಡನಾರ್ಹವಾಗಿದೆ ಎಂದರು. ಟಿಪ್ಪು ಜಯಂತಿ ನಿಲ್ಲಿಸುವುದು ಸೂಕ್ತವಾದುದ್ದಲ್ಲ. ಬಿಜೆಪಿ ಸರ್ಕಾರ ವಿವಾದಾತ್ಮಕ ನಿರ್ಣಯಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಬೇಕು. ಕೇವಲ ರಾಜಕೀಯ ಮಾತ್ರ ಇವರ ಚಿಂತನೆ ಆಗಬಾರದು. ಟಿಪ್ಪು ಬಗ್ಗೆ ಓದಿಕೊಳ್ಳಬೇಕು ಎಂದು ಟಾಂಗ್ ನೀಡಿದರು.
ಚಿನ್ನದ ಮೇಲೆ ಕೇಂದ್ರ ಸರ್ಕಾರ ಹಿಡಿತ ಸಾಧಿಸುವ ವಿಚಾರಕ್ಕೆ ಮಾತನಾಡಿದ ಅವರು, ಅದೊಂದು ಸ್ವಾಗತಾರ್ಹ ನಿರ್ಧಾರ. ಚಿನ್ನ-ಬೆಳ್ಳಿ ಯಾವುದೇ ಇರಲಿ. ಅಕ್ರಮವಾಗಿ ಹೊಂದಲೇಬಾರದು. ಅಕ್ರಮ ವಸ್ತು ಎಲ್ಲಿದೆ ಅದನ್ನು ಹೆಕ್ಕಿ ತರುವ ಕಾರ್ಯ ಆಗಬೇಕು. ಆದರೆ ಕಾನೂನುಗಳನ್ನು ಮಾಡಿ ತಪ್ಪು ಬಳಕೆ ಆಗಬಾರದು ಎಂದರು.