ಹುಬ್ಬಳ್ಳಿ: ತಾರಿಹಾಳ ಕೈಗಾರಿಕಾ ಪ್ರದೇಶದ ಕಾರ್ಖಾನೆಯಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿದ್ದ ಮಹಿಳೆ ಕಿಮ್ಸ್ನಲ್ಲಿ ತಡರಾತ್ರಿ ಸಾವನ್ನಪ್ಪಿದ್ದರು, ಭಾನುವಾರ ಮತ್ತಿಬ್ಬರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಗದಗ ಮೂಲದ ವಿಜಯಲಕ್ಷ್ಮಿ ವೀರಭದ್ರಪ್ಪ ಯಚ್ಚನಾಗರ ತಡರಾತ್ರಿ ಮೃತರಾದರೆ, ಗಂಭೀರವಾಗಿದ್ದ ಗೌರವ್ವ (45) ಹಾಗೂ ಮಾಳೇಶ (27) ಎಂಬುವರು ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ಉಳಿದ ಐವರಿಗೆ ಕಿಮ್ಸ್ನಲ್ಲಿ ಚಿಕಿತ್ಸೆ ಮುಂದುವರೆದಿದೆ.
ತಾರಿಹಾಳ ಕೈಗಾರಿಕಾ ಪ್ರದೇಶದ ಮೊದಲ ಅಡ್ಡರಸ್ತೆಯಲ್ಲಿರುವ ಸ್ಪಾರ್ಕರ್ ತಯಾರಿಕಾ ಘಟಕದಲ್ಲಿ ನಿನ್ನೆ ಅಗ್ನಿ ಅವಘಡ ಉಂಟಾಗಿತ್ತು. ದುರ್ಘಟನೆಯಲ್ಲಿ ಎಂಟು ಜನರು ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಳುಗಳನ್ನು ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿತ್ತು.
ಈ ಕಾರ್ಖಾನೆ ಕೇವಲ 15 ದಿನದ ಹಿಂದಷ್ಟೆ ಆರಂಭವಾಗಿದ್ದು, ಅನಧಿಕೃತವಾಗಿದೆ ಎನ್ನಲಾಗಿದೆ. ಘಟನೆಯ ಬಳಿಕ ಮಾಲೀಕ ತಬ್ಸುಮ್ ಶೇಕ್ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಸ್ಪಾರ್ಕರ್ ತಯಾರಿಕಾ ಘಟಕದಲ್ಲಿ ಅಗ್ನಿ ಅವಘಡ: ನಾಲ್ವರು ಕಾರ್ಮಿಕರ ಸಾವಿನ ಶಂಕೆ!