ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ನೈಋತ್ಯ ವಲಯದ ರೈಲ್ವೆ ನಿಲ್ದಾಣ ವಿಶ್ವದ ಅತಿದೊಡ್ಡ ರೈಲ್ವೆ ಪ್ಲಾಟ್ ಫಾರಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ನಿಜ. ಆದರೆ ಇಲ್ಲಿ ಭದ್ರತೆ ಮಾತ್ರ ಹೇಳಿಕೊಳ್ಳುವ ಮಟ್ಟಿಗೆ ಇಲ್ಲವಾಗಿದೆ. ಅಲ್ಲದೆ ಸ್ಫೋಟಕ ಪ್ರಕರಣವೊಂದು ನಡೆದು ಎರಡು ವರ್ಷಗಳಾದರೂ ಇದುವರೆಗೂ ರೈಲ್ವೆ ಇಲಾಖೆ ಮಾತ್ರ ಯಾವುದೇ ರೀತಿಯ ಭದ್ರತೆ ಬಗ್ಗೆ ತಲೆ ಕಡಿಸಿಕೊಂಡಿಲ್ಲ.
ಪ್ರಯಾಣಿಕರ ಮೇಲೆ ನಿಗಾ ಇಟ್ಟು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮೆಟಲ್ ಡಿಟೆಕ್ಟರ್ ಹಾಗೂ ಚೆಕಿಂಗ್ ಮಷಿನ್ ಅಳವಡಿಕೆ ಮಾಡಲಾಗಿದೆ. ಆದರೆ ಈ ತಪಾಸಣೆ ಯಂತ್ರಗಳು ಹೆಸರಿಗೆ ಮಾತ್ರ ಎನ್ನುವಂತಾಗಿದೆ. ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕೆ ಯಾವುದೇ ವಸ್ತುಗಳನ್ನು ಕೂಡ ನಿರ್ಭಯವಾಗಿ ತೆಗೆದುಕೊಂಡು ಹೋಗಬಹುದಾಗಿದೆ. ಅಷ್ಟರಮಟ್ಟಿಗೆ ಅವ್ಯವಸ್ಥೆ ತಾಂಡವವಾಡುತ್ತಿದೆ.
ಇದನ್ನೂ ಓದಿ: ಹುಬ್ಬಳ್ಳಿ ತ್ರಿವಳಿ ಕೊಲೆ ಪ್ರಕರಣ: ಸಿಆರ್ಪಿಎಫ್ ಯೋಧನಿಗೆ ಜೀವಾವಧಿ ಶಿಕ್ಷೆ
ಮೊದಲು ಕೆಲವು ದಿನ ಪ್ರಯಾಣಿಕರ ಬ್ಯಾಗ್ ಹಾಗೂ ಲಗೇಜ್ಗಳನ್ನು ತಪಾಸಣೆ ಮಾಡಲಾಗುತ್ತಿತ್ತು. ಆದರೆ ಅದು ಕೂಡ ಇಲ್ಲವಾಗಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಮಷಿನ್ಗೆ ಕೆಲಸವಿಲ್ಲದೇ ಧೂಳು ಹಿಡಿಯುತ್ತಿದೆ.
ನೈರುತ್ಯ ರೈಲ್ವೆ ವಲಯ ಕಚೇರಿ ಜೊತೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿಯೇ ಇಂತಹ ಅವ್ಯವಸ್ಥೆ ತಲೆದೋರಿದ್ದರೂ ಅಧಿಕಾರಿಗಳು ಮಾತ್ರ ತಲೆ ಕೆಡಿಸಿಕೊಂಡಿಲ್ಲ. ಇನ್ನಾದರೂ ಎಚ್ಚೆತ್ತುಕೊಂಡು ಮುಂಬರುವ ದಿನಗಳಲ್ಲಿ ಸಂಭವಿಸಬಹುದಾದ ಅವಘಡಗಳಿಗೆ ಕಡಿವಾಣ ಹಾಕುವ ಅನಿವಾರ್ಯತೆ ಇದೆ.