ಹುಬ್ಬಳ್ಳಿ: ಲವ್ ಜಿಹಾದ್ ಆರೋಪದ ಪ್ರಕರಣದ ಹಿನ್ನೆಲೆ ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗೇಶ ಕಲಬುರ್ಗಿಯವರು ಬರೆದಿದ್ದಾರೆ ಎನ್ನಲಾದ ಪತ್ರವೊಂದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಲವ್ ಜಿಹಾದ್ ಎಂದು ಆರೋಪಿಸಿದ್ದ ಪ್ರಕರಣಕ್ಕೆ ಯುವತಿಯೇ ವಿಡಿಯೋವೊಂದನ್ನು ಹರಿಬಿಟ್ಟು ಪ್ರಕರಣಕ್ಕೆ ಟ್ವಿಸ್ಟ್ ನೀಡಿದ್ದಳು. ಅಲ್ಲದೇ ಪೊಲೀಸರು ಗೋವಾದಿಂದ ಯುವತಿಯನ್ನು ಕರೆತಂದರೂ ಕೂಡ ಪಾಲಕರ ಬಳಿಗೆ ಹೋಗಲು ಆಕೆ ನಿರಾಕರಿಸಿದ್ದಳು.
ಆದರೆ, ಈಗ ಎಸ್.ಎಸ್.ಕೆ ಸಮಾಜದವರಾಗಿರುವ ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗೇಶ ಕಲಬುರ್ಗಿಯವರ ಲೆಟರ್ ಹೆಡ್ವೊಂದರಲ್ಲಿ ಎಸ್.ಎಸ್.ಕೆ ಸಮಾಜದ ಹೆಣ್ಣು ಮಕ್ಕಳು ಲವ್ ಜಿಹಾದ್ ಪ್ರಕರಣದಲ್ಲಿ ಸಿಲುಕಿಕೊಳ್ಳುತ್ತಿದ್ದು, ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಜರುಗಿಸುವಂತೆ ಎಸ್.ಎಸ್.ಕೆ ಸಮಾಜದ ಧರ್ಮದರ್ಶಿ ನೀಲಕಂಠಸಾ ಜಡಿ ಅವರಿಗೆ ಪತ್ರ ಬರೆದಿದ್ದಾರೆ.
ಎಸ್.ಎಸ್.ಕೆ ಸಮಾಜದ ಹೆಣ್ಣು ಮಕ್ಕಳು ಮುಸ್ಲಿಂ ಯುವಕರನ್ನು ಮದುವೆಯಾದರೇ ಅಂತಹ ಕುಟುಂಬವನ್ನು ಸಮಾಜದಿಂದ ಹೊರಗೆ ಇಡುವುದು, ಯಾವುದೇ ದೇವಸ್ಥಾನಗಳಿಗೆ ಪ್ರವೇಶ ನೀಡುವಂತಿಲ್ಲ. ಅಲ್ಲದೇ ಯಾರೂ ಕೂಡ ಆ ಕುಟುಂಬಕ್ಕೆ ಹೆಣ್ಣನ್ನು ಕೊಡಬಾರದು ಎಂದು ಪತ್ರದಲ್ಲಿ ಬರೆಯಲಾಗಿದೆ. ಆದರೆ, ಸಾರ್ವಜನಿಕರ ಸೇವೆಗಾಗಿ ಬರೆಯಬೇಕಿದ್ದ ತಲೆಬರಹ ಇರುವ ಪತ್ರವನ್ನು ಸಮಾಜಕ್ಕಾಗಿ ಬಳಕೆ ಮಾಡಿದ್ದು, ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುವವರು ಒಂದು ಕೋಮಿನ ಬಗ್ಗೆ ಪತ್ರ ಬರೆದಿದಲ್ಲದೇ, ತಮ್ಮದೇ ಸಮುದಾಯದ ಯುವತಿ ಕುಟುಂಬವನ್ನು ಸಮಾಜದಿಂದ ಹೊರಗಿಡುವುದು ಹಾಗೂ ಸಾಮಾಜಿಕ ಬಹಿಷ್ಕಾರ ಹಾಕುವಂತೆ ಸಮಾಜದ ಗಣ್ಯರಿಗೆ ಪತ್ರದ ಮೂಲಕ ಮನವಿ ಮಾಡಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಸಾಮಾಜಿಕ ಬಹಿಷ್ಕಾರ ಸಮರ್ಥಿಸಿದ ಹುಡಾ ಅಧ್ಯಕ್ಷ : ಹುಬ್ಬಳ್ಳಿ ಲವ್ ಜಿಹಾದ್ಗೆ ಗುರಿಯಾದ ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಮಾಡುವಂತೆ ಬರೆದ ಪತ್ರವನ್ನು ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ ಸಮರ್ಥಿಸಿಕೊಂಡಿದ್ದಾರೆ. ಸಾಮಾಜಿಕ ಬಹಿಷ್ಕಾರದ ಭಯ ಹುಟ್ಟಿದರೆ ಖಂಡಿತ ಸರಿ ಹೋಗುತ್ತದೆ. ಅದಕ್ಕಾಗಿಯೇ ಲವ್ ಜಿಹಾದ್ಗೆ ಗುರಿಯಾಗುವ ಕುಟುಂಬಗಳನ್ನು ಸಾಮಾಜಿಕವಾಗಿ ಬಹಿಷ್ಕರಿಸಬೇಕು.
ಅಂತಹ ಕುಟುಂಬಗಳಿಗೆ ದೇವಸ್ಥಾನ ಪ್ರವೇಶ ನೀಡಬಾರದು, ಅವರ ಹೆಣ್ಣುಮಕ್ಕಳನ್ನು ಕೊಡುವ, ತೆಗೆದುಕೊಳ್ಳುವ ಕಾರ್ಯ ಮಾಡಬಾರದು ಎಂಬುದು ಸೇರಿ 5 ಅಂಶಗಳನ್ನು ಇಟ್ಟುಕೊಂಡು ಎಸ್.ಎಸ್. ಕೆ ಸಮಾಜದ ಧರ್ಮದರ್ಶಿಗೆ ಪತ್ರ ಬರೆದಿದ್ದೇನೆ. ಹೀಗೆ ಮಾಡದೇ ಇದ್ದಲ್ಲಿ ಇಂತಹ ಮತ್ತಷ್ಟು ಪ್ರಕರಣಗಳು ನಡೆಯುತ್ತವೆ. ಹಾಗಾಗಿ, ಸೂಕ್ತ ಕ್ರಮಕೈಗೊಳ್ಳುವಂತೆ ಧರ್ಮದರ್ಶಿಗಳಿಗೆ ಪತ್ರ ಬರೆದಿದ್ದೇನೆ. ಇದರಲ್ಲಿ ತಪ್ಪೇನೂ ಇಲ್ಲ ಎಂದು ನಾಗೇಶ ಕಲಬುರ್ಗಿ ಸಮರ್ಥಿಸಿಕೊಂಡಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿ 'ಲವ್ ಜಿಹಾದ್ ಕೇಸ್': ಪೋಷಕರ ಜೊತೆ ತೆರಳಲು ನಿರಾಕರಿಸಿದ ಯುವತಿ
ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಎಸ್ಎಸ್ಕೆ ಸಮಾಜದ ಧರ್ಮದರ್ಶಿ ನೀಲಕಂಠಸಾ ಜಡಿ, ಸಮಾಜದ ಬಗ್ಗೆ ಕಳಕಳಿ ಇರುವ ನಾಗೇಶ್ ಕಲಬುರಗಿ ಅವರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಆದ್ರೆ, ಹೀಗೆ ಮಾಡಿ ಅಂತಾ ಒತ್ತಡ ಹೇರಿಲ್ಲ. ನಮ್ಮ ಸಮಾಜಕ್ಕೆ ಒಳಪಟ್ಟ ವಿಚಾರ ಇದು, ನಾವು ಚರ್ಚೆ ಮಾಡುತ್ತೇವೆ. ನಮ್ಮಲ್ಲಿ 50ಕ್ಕೂ ಹೆಚ್ಚು ಟ್ರಷ್ಟಿಗಳಿದ್ದು, ಎಲ್ಲರೂ ಸೇರಿ ಈ ವಿಚಾರದ ಬಗ್ಗೆ ಚರ್ಚೆ ನಡೆಸಬೇಕಿದೆ ಎಂದರು.