ಹುಬ್ಬಳ್ಳಿ: ಸಿದ್ದರಾಮಯ್ಯನವರು ಜನಪ್ರಿಯ ನಾಯಕರಾಗಿದ್ದರೂ ಕೇವಲ 80 ಸೀಟು ಪಡೆದಿದ್ಧಾರೆ ಎಂಬ ಹೆಚ್.ವಿಶ್ವನಾಥರ ಹೇಳಿಕೆಗೆ, ಸಚಿವ ಎಂಟಿಬಿ ನಾಗರಾಜ ತಿರುಗೇಟು ನೀಡಿದ್ದಾರೆ. ವಿಶ್ವನಾಥ್ ಅವರಿಗೆ ಬಾಯಿ ಚಪಲನೋ ಏನೋ ಪಾಪ.. ಸಿದ್ಧರಾಮಯ್ಯನವರ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ರೀತಿಯಾಗಿ ಸಿದ್ದರಾಮಯ್ಯ ವಿರುದ್ಧ ಮಾತನಾಡಬಾರದಿತ್ತು. ಆದರೆ, ವಿಶ್ವನಾಥ್ ಅವರು ಬಾಯಿ ಚಪಲಕ್ಕೆ ಮಾತನಾಡಿದ್ದಾರೆ. ಇದರಿಂದ ಮೈತ್ರಿ ಸರ್ಕಾರ ಬೀಳೋದಿಲ್ಲ ಎಂದು ಸ್ಪಷ್ಟಪಡಿಸಿದರು.
ಕುಂದಗೋಳ ಉಪ ಚುನಾವಣೆ ಕುರಿತು ಮಾತನಾಡಿದ ಅವರು, ನನಗೆ ಎರಡು ಜಿಪಂ ಕ್ಷೇತ್ರ ಜವಾಬ್ದಾರಿವಹಿಸಿದ್ದಾರೆ. ಕುಂದಗೋಳದಲ್ಲಿ ನಾನು ಕುಸುಮಾ ಶಿವಳ್ಳಿ ಪರ ಪ್ರಚಾರ ಮಾಡುತ್ತಿದ್ದೇನೆ. ಚಿಂಚೋಳಿ, ಕುಂದಗೋಳ ಎರಡು ಕಡೆಗೂ ಕಾಂಗ್ರೆಸ್ ಗೆಲ್ಲುವುದು ನಿಶ್ಚಿತ ಎಂದು ಸಚಿವ ಎಂಟಿಬಿ ನಾಗರಾಜ್ ವಿಶ್ವಾಸ ವ್ಯಕ್ತಪಡಿಸಿದರು.