ಹುಬ್ಬಳ್ಳಿ: ನೆರೆಯಿಂದ ಸಂಕಷ್ಟದಲ್ಲಿರುವ ಜನರಿಗೆ 2 ವರ್ಷದಿಂದ ಪರಿಹಾರ ಸಿಕ್ಕಿಲ್ಲ. ಪ್ರಧಾನಿ ನರೇಂದ್ರ ಮೋದಿ ಬೇರೆ ರಾಜ್ಯಗಳಿಗೆ ಹೋಗಿ ನೆರೆ ಸಮೀಕ್ಷೆ ನಡೆಸಿ ಪರಿಹಾರ ಘೋಷಿಸಿದ್ದಾರೆ. ಆದರೆ ಕರ್ನಾಟಕ ರಾಜ್ಯಕ್ಕೆ ಮಾತ್ರ ಪರಿಹಾರ ಘೋಷಿಸಿಲ್ಲ. ಈ ಬಗ್ಗೆ ರಾಜ್ಯದ 25 ಜನ ಎಂಪಿಗಳು ಕೂಡ ಮಾತನಾಡಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಿಸಿದರು.
ನಗರದ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಭಾಗದಲ್ಲಿ ಆಗುತ್ತಿರುವ ಮಳೆಯಿಂದ ನೆರೆಯಾಗಿ ಜನರ ಅಪಾರ ಪ್ರಮಾಣದ ಸಂಪತ್ತು, ಮನೆ, ಉದ್ಯೋಗ ಎಲ್ಲವೂ ನಾಶವಾಗಿದೆ. ಈ ಎಲ್ಲಾ ವಿಚಾರಗಳನ್ನು ಸ್ಥಳೀಯ ಮಟ್ಟದಲ್ಲಿ ತೆಗೆದುಕೊಂಡು ಮುಂದೆ ಜನರಿಗೆ ಸಹಾಯ ಹಸ್ತ ಚಾಚುವ ಉದ್ದೇಶದ ಹಿನ್ನೆಲೆ ಸರ್ಕಾರದ ಮೇಲೆ ಒತ್ತಡ ಹೇರುವ ಕುರಿತು ಗುರುವಾರ ಮತ್ತು ಶುಕ್ರವಾರ ಎಲ್ಲ ಜಿಲ್ಲೆಗಳ ಕಾರ್ಯಕರ್ತರೊಂದಿಗೆ ಸಭೆ ನಡೆಸಲಾಗುತ್ತದೆ ಎಂದರು.
ಪಕ್ಷವನ್ನು ಸಂಘಟನಾತ್ಮಕವಾಗಿ ಬಲ ಪಡಿಸಲು ನಾವು ಎಲ್ಲರೂ ಇಲ್ಲಿಗೆ ಆಗಮಿಸಿದ್ದೇವೆ. ಬೆಳಗಾವಿಯ ವಿಭಾಗ ಮಟ್ಟದ ಎಲ್ಲ ನಾಯಕರನ್ನು ಕರೆಸಿ ಸಭೆಯಲ್ಲಿ ಸಂಘಟನೆ, ಸ್ಥಿತಿ ಮತ್ತು ಮುಂದೆ ಮಾಡಬೇಕಾದ ಕಾರ್ಯದ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.
ಈ ಸಭೆಗೆ ಎಎಸಿಸಿ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ, ಶಾಸಕಾಂಗ ಪಕ್ಷದ ನಾಯಕರು, ಕಾರ್ಯದರ್ಶಿ ಸಮಿತಿ ಸದಸ್ಯರು, ಕಾಂಗ್ರೆಸ್ನ ಎಲ್ಲ ಹಿರಿಯ ನಾಯಕರು, ಎಲ್ಲ ಜಿಲ್ಲಾ ಕಾಂಗ್ರೆಸ್ನಿಂದ ಚುನಾವಣೆ ಗೆದ್ದವರು, ಸೋತವರನ್ನು ಆಹ್ವಾನಿಸಲಾಗಿದೆ. ಪ್ರತ್ಯೇಕವಾಗಿ ಜಿಲ್ಲಾವಾರು ಸಭೆ ನಡೆಸಲಾಗುವುದು. ನಾಳೆ ಬೆಳಗ್ಗೆ ಮಧು ಬಂಗಾರಪ್ಪ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಲಿದ್ದಾರೆ ಎಂದು ಡಿಕೆಶಿ ತಿಳಿಸಿದರು.
ರಾಜ್ಯ ನೆರೆಗೆ ತುತ್ತಾಗಿದ್ದು, ಈ ಹಿನ್ನೆಲೆ ಪ್ರತಿಪಕ್ಷದ ನಾಯಕರಾದ ಸಿದ್ದರಾಮಯ್ಯ ರಾಜ್ಯದಲ್ಲಿ ಎರಡು ದಿನಗಳಿಂದ ಪ್ರವಾಸ ಮಾಡಿದ್ದಾರೆ. ನಮ್ಮ ಶಾಸಕರು ಮತ್ತು ನಾಯಕರು ಅನೇಕ ತಾಲೂಕು ಮತ್ತು ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಪ್ರಧಾನ ಮಂತ್ರಿ ಎರಡು ವರ್ಷವೂ ರಾಜ್ಯಕ್ಕೆ ಭೇಟಿ ನೀಡಿಲ್ಲ. ಈಗ ನೂತನ ಸಿಎಂ ಏನು ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕು ಎಂದು ಹೇಳಿದರು.
ಇದನ್ನೂ ಓದಿ: 'ಪ್ರವಾಹ, ಭೂಕುಸಿತದಿಂದ ಸರ್ವಸ್ವವೂ ನಾಶ..' ಮುಖ್ಯಮಂತ್ರಿ ಮುಂದೆ ವಿದ್ಯಾರ್ಥಿಗಳ ಕಣ್ಣೀರು