ಹುಬ್ಬಳ್ಳಿ (ಧಾರವಾಡ): ಮಹಾನಗರ ಪಾಲಿಕೆಯು ಕಳೆದ ಆರ್ಥಿಕ ವರ್ಷದಲ್ಲಿ (2021-22) ಶೇ. 73.96 ರಷ್ಟು ಕರ ಸಂಗ್ರಹಿಸಿದ್ದು, ಹಿಂದಿನ ಬಾರಿಗಿಂತಲೂ ಶೇ. 1ರಷ್ಟು ಕಡಿಮೆಯಾಗಿದೆ. 2020-21ರಲ್ಲಿ ಕೊರೊನಾ ಲಾಕ್‌ಡೌನ್ ಮಧ್ಯೆಯೂ ನಿಗದಿತ ಗುರಿ 97 ಕೋಟಿ ರೂ. ಗಳಲ್ಲಿ 71 ಕೋಟಿ ರೂ. ಪಾವತಿಯಾಗಿತ್ತು. ಈ ಬಾರಿ (2021-22) ನಿರ್ಬಂಧಗಳು ಸಡಿಲಿಕೆಯಾಗಿದ್ದರೂ ಮತ್ತು ಕೊರೊನಾ ಕೆಲಸ ಇಲ್ಲದಿದ್ದರೂ ಕಡಿಮೆ ಟ್ಯಾಕ್ಸ್ ಸಂಗ್ರಹವಾಗಿದೆ.
ಪಾಲಿಕೆಯ 12 ವಲಯಗಳಲ್ಲಿ ನವನಗರ ವ್ಯಾಪ್ತಿಯ ವಲಯ ನಂ. 2 ಅತಿ ಹೆಚ್ಚು ಅಂದರೆ ಶೇ. 91.61ರಷ್ಟು ಟ್ಯಾಕ್ಸ್ ಸಂಗ್ರಹಿಸುವ ಮೂಲಕ ಅತ್ಯುತ್ತಮ ವಲಯ ಎಂಬ ಪ್ರಶಸ್ತಿಗೆ ಭಾಜನವಾಗಿದೆ. ಶೇ.83.73 ರಷ್ಟು ತೆರಿಗೆ ಸಂಗ್ರಹಿಸಿದ ವಲಯ ನಂ.1 ಎರಡನೇ ಸ್ಥಾನ ಗಳಿಸಿದೆ. ವಲಯ ನಂ. 4- ಶೇ.83.59 ಟ್ಯಾಕ್ಸ್ ಸಂಗ್ರಹಿಸಿ ಮೂರನೇ ಸ್ಥಾನಗಳಿಸಿದೆ. ಶೇ 53.97 ರಷ್ಟು ಮಾತ್ರ ಕರ ಸಂಗ್ರಹಿಸಿದ ವಲಯ ನಂ.11 ಅತ್ಯಂತ ಕಳಪೆ ಸಾಧನೆ ಮಾಡಿದೆ. ಮೊದಲ ಮೂರು ವಲಯಗಳಿಗೆ ಪಾಲಿಕೆ ಆಯುಕ್ತರು ಪ್ರಶಂಸನಾ ಪತ್ರ ನೀಡಿ ಗೌರವಿಸಿದ್ದಾರೆ.
ಧಾರವಾಡ ವಿಭಾಗದ 1, 2, 3, 4 ಹಾಗೂ ನಂ. 12 ವಲಯಗಳು ಶೇ. 80ಕ್ಕೂ ಹೆಚ್ಚು ಪ್ರಮಾಣದ ಕರ ಸಂಗ್ರಹಿಸಿದೆ. ಹುಬ್ಬಳ್ಳಿ ವಿಭಾಗದ 8 ವಲಯಗಳು ಸರಾಸರಿ ಶೇ.60ರಷ್ಟು ಮಾತ್ರ ಕರ ವಸೂಲು ಮಾಡಿವೆ. ಮಾರ್ಚ್ 31ರವರೆಗಿನ ಮಾಹಿತಿ ಪ್ರಕಾರ, ವಲಯ ನಂ.1 - ಶೇ.83.73, ವಲಯ ನಂ.2- ಶೇ.91.61, ನಂ.3- ಶೇ.82.18, ನಂ.4- ಶೇ.83.59, ನಂ.5 - ಶೇ.73.08, ನಂ.6- ಶೇ.82.72, ನಂ.7- ಶೇ.65.53, ನಂ.8- ಶೇ.63.37, ನಂ.9-ಶೇ.60.64, ನಂ.10- ಶೇ.61.63, ನಂ.11- ಶೇ.53.97, ನಂ.12ರಲ್ಲಿ ಶೇ.80.26 ರಷ್ಟು ತೆರಿಗೆ ಸಂಗ್ರಹವಾಗಿದೆ.
2021-22ರ ಹಣಕಾಸು ವರ್ಷದಲ್ಲಿ ಗುರಿ ಹೊಂದಿದ್ದ 118.98 ಕೋಟಿ ರೂ.ಗಳಲ್ಲಿ 88.03 ಕೋಟಿ ರೂ. ಮಾತ್ರ ಆಸ್ತಿ ಕರ ಸಂಗ್ರಹಿಸಿದೆ. ಇನ್ನೂ 30.90 ಕೋಟಿ ರೂ. ತೆರಿಗೆ ಪಾವತಿಯಾಗಬೇಕಿದೆ. 2,468 ವಾಣಿಜ್ಯ ಅಂಗಡಿ ಮುಂಗಟ್ಟುಗಳಿಂದ 4.30 ಕೋಟಿ ರೂ. (ಶೇ 90.45) ಕರ ಸಂಗ್ರಹಿಸಿದೆ. ಬಾಕಿ ಉಳಿಸಿಕೊಂಡ ಆಸ್ತಿ ತೆರಿಗೆ ಮೇಲೆ ವಿಧಿಸಿದ ದಂಡದ ರೂಪದಲ್ಲಿ 15.48 ಕೋಟಿ ರೂ.ಗಳನ್ನು ಪಾಲಿಕೆ ವಸೂಲು ಮಾಡಿದೆ. ಪಾಲಿಕೆ ವ್ಯಾಪ್ತಿಯಲ್ಲಿ 1,63,127 ರೆಸಿಡೆನ್ಸಿಯಲ್, 29,866 ವಾಣಿಜ್ಯ ಹಾಗೂ 89,666 ಖಾಲಿ ಸೈಟ್‌ಗಳು ಸೇರಿ 2,82,656 ಆಸ್ತಿಗಳಿದ್ದು ಇವೆಲ್ಲವುಗಳು ತೆರಿಗೆ ವ್ಯಾಪ್ತಿಗೆ ಒಳಪಡುತ್ತವೆ.
ಇದನ್ನೂ ಓದಿ: 22 ದಿನಗಳ ಬಳಿಕ ತಾಯಿ ಮಡಿಲು ಸೇರಿದ ಶಿಶು: ಕಂದನನ್ನು ಪೋಷಕರಿಗೆ ಒಪ್ಪಿಸಿದ ಪೊಲೀಸರಿಗೆ ಸನ್ಮಾನ
ತೆರಿಗೆ ಸಂಗ್ರಹದಲ್ಲಿ ಕಳಪೆ ಸಾಧನೆ ಗಮನಿಸಿದ ಪಾಲಿಕೆ ಆಯುಕ್ತರು ಕಳೆದ ಎರಡು ತಿಂಗಳಿಂದ ವಾರಕ್ಕೊಮ್ಮೆ ವಲಯ ಅಧಿಕಾರಿಗಳು, ಬಿಲ್ ಕಲೆಕ್ಟರ್‌ಗಳ ಸಭೆ ಕರೆದು ವಾರದ ಗುರಿ ನಿಗದಿಪಡಿಸುತ್ತಿದ್ದರು. ಆಯಾ ವಾರ ಟ್ಯಾಕ್ಸ್ ಕಲೆಕ್ಷನ್ ಮಾಡದವರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಅಲ್ಲದೇ ಅತಿ ಹೆಚ್ಚು ತೆರಿಗೆ ಸಂಗ್ರಹಿಸಿದ ವಲಯಕ್ಕೆ ಪ್ರಶಂಸನಾ ಪತ್ರ ನೀಡುವುದಾಗಿಯೂ ವಾಗ್ದಾನ ಮಾಡಿದ್ದರು. ಅದರಂತೆ ಈ ಬಾರಿ ಹೆಚ್ಚು ಟ್ಯಾಕ್ಸ್ ಕಲೆಕ್ಷನ್ ಮಾಡಿದ ವಲಯಗಳಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಿದರು. ಇದೇ ರೀತಿ ಮಣಿವಣ್ಣನ ಆಯುಕ್ತರಾಗಿದ್ದಾಗಲೂ ಪ್ರಶಂಸನಾ ಪತ್ರ ನೀಡಿದ್ದರು.