ಧಾರವಾಡ: ವಿಧಾನ ಪರಿಷತ್ ಚುನಾವಣೆ ಪ್ರಚಾರಕ್ಕೆಂದು ಧಾರವಾಡಕ್ಕೆ ತೆರಳಿರುವ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ವಾಹನಕ್ಕೆ ಪಿಎಸ್ಐ ಮರು ಮರೀಕ್ಷೆ ಬಯಸುವ ಅಭ್ಯರ್ಥಿಗಳು ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಆಗ ಹೆಚ್ಡಿಕೆ ವಾಹನದ ಹಿಂದೆ ಬಂದ ಅಭ್ಯರ್ಥಿಯೊಬ್ಬರ ಮೇಲೆ ಗನ್ಮ್ಯಾನ್ ಹಲ್ಲೆ ಮಾಡಿದ ಘಟನೆ ನಡೆದಿದೆ.
ವಿಧಾನ ಪರಿಷತ್ ಚುನಾವಣೆ ಪ್ರಚಾರಕ್ಕೆಂದು ಕುಮಾರಸ್ವಾಮಿ ಧಾರವಾಡಕ್ಕೆ ತೆರಳಿದ್ದಾರೆ. ಬಳಿಕ ಅತಿಥಿ ಉಪನ್ಯಾಸಕರು ಪ್ರತಿಭಟನೆ ನಡೆಸುತ್ತಿರುವ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಪಿಎಸ್ಐ ಪರೀಕ್ಷೆ ಪಾಸಾಗಿರುವ ಅಭ್ಯರ್ಥಿಗಳು ಮರು ಪರೀಕ್ಷೆ ನಡೆಸದಂತೆ ಮನವಿ ಮಾಡಿದರು. ತಾವು ಪ್ರಾಮಾಣಿಕವಾಗಿ ಪರೀಕ್ಷೆ ಬರೆದಿರುವುದಾಗಿ ಅಳಲು ತೋಡಿಕೊಂಡರು.
ಆದರೂ ಮತ್ತೊಮ್ಮೆ ಪರೀಕ್ಷೆ ಏಕೆ ಅಂತಾ ಪಿಎಸ್ಐ ಪಾಸ್ ಆದ ಅಭ್ಯರ್ಥಿಗಳು ಪ್ರಶ್ನಿಸಿದರು. ಇದೇ ವೇಳೆ ಸ್ಥಳಕ್ಕೆ ಪರೀಕ್ಷೆಯಲ್ಲಿ ತೇರ್ಗಡೆಯಾಗದ ಅಭ್ಯರ್ಥಿಗಳು ಆಗಮಿಸಿ ಮರುಪರೀಕ್ಷೆ ನಡೆಯಲೇಬೇಕು ಅಂತಾ ಆಗ್ರಹಿಸಿದರು.
ಓದಿ: ಪಿಎಸ್ಐ ಪರೀಕ್ಷಾ ಅಕ್ರಮ ಪ್ರಕರಣ : ಆರ್ ಡಿ ಪಾಟೀಲ್ನ ಮತ್ತಿಬ್ಬರು ಆಪ್ತರ ಬಂಧನ
ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದ್ದು, 545 ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ ಎಂದು ಹೆಚ್ಡಿಕೆ ಹೇಳಿದರು. ನಮಗೆ ಅನ್ಯಾಯವಾಗಿಲ್ಲವೇ ಅಂತಾ ತೇರ್ಗಡೆಯಾದ ಅಭ್ಯರ್ಥಿಗಳು ಪ್ರಶ್ನಿಸಿದರು. ಹೆಚ್ಡಿಕೆ ವಿರುದ್ಧ ಘೋಷಣೆ ಹಾಕಿದ ಮರು ಪರೀಕ್ಷೆ ಬಯಸುವ ಅಭ್ಯರ್ಥಿಗಳು, ಡಬಲ್ ಸ್ಟ್ಯಾಂಡರ್ಡ್ ಏಕೆ ಅಂತಾ ಪ್ರಶ್ನೆ ಮಾಡಿದರು.
ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಬಳಿಕ ಕುಮಾರಸ್ವಾಮಿ ಅಲ್ಲಿಂದ ಹೊರಡಲು ಮುಂದಾದರು. ಈ ವೇಳೆ ಮರುಪರೀಕ್ಷೆ ಬಯಸುವ ಅಭ್ಯರ್ಥಿಗಳು ಕಾರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಅಭ್ಯರ್ಥಿಗಳು ಕಾರಿಗೆ ಅಡ್ಡ ಬಂದು ಹೈಡ್ರಾಮಾ ಮಾಡಲು ಮುಂದಾದರು. ಆಗ ಎಲ್ಲರನ್ನು ಬದಿಗೆ ಸರಿಸಲು ಪೊಲೀಸರು ಹರಸಾಹಸ ಪಟ್ಟರು. ಕೊನೆಗೂ ಅಲ್ಲಿಂದ ತೆರಳಲು ಕುಮಾರಸ್ವಾಮಿ ಮುಂದಾದರು. ಈ ವೇಳೆ ಪಿಎಸ್ಐ ಪರೀಕ್ಷೆ ಬರೆಯಲು ಇಚ್ಛಿಸಿದ ಅಭ್ಯರ್ಥಿಗಳು ‘ಮೋದಿ.. ಮೋದಿ..’ ಅಂತಾ ಘೋಷಣೆ ಕೂಗಿದರು.
ಕುಮಾರಸ್ವಾಮಿ ಕವಿವಿಗೆ ತೆರಳುವ ಮುನ್ನ ಪೊಲೀಸರ ಹಾಗೂ ಅಭ್ಯರ್ಥಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಪಿಎಸ್ಐ ಅಭ್ಯರ್ಥಿಯೊಬ್ಬ ಕುಮಾರಸ್ವಾಮಿ ವಾಹನವನ್ನು ಬೆನ್ನಟ್ಟಿದರು. ಈ ವೇಳೆ ಕುಮಾರಸ್ವಾಮಿ ಗನ್ ಮ್ಯಾನ್ ಪಿಎಸ್ಐ ಅಭ್ಯರ್ಥಿ ಮೇಲೆ ಹಲ್ಲೆ ನಡೆಸಿದರು.