ಹುಬ್ಬಳ್ಳಿ: ಶೀಘ್ರದಲ್ಲೇ ಕೇಂದ್ರ ಸರ್ಕಾರ ರಾಜ್ಯಕ್ಕೆ ನೆರೆ ಪರಿಹಾರ ಬಿಡುಗಡೆ ಮಾಡಲಿದೆ ಎಂದು ಕೇಂದ್ರ ಹಣಕಾಸು ರಾಜ್ಯ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್ ಭರವಸೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಹಾರ ಬಿಡುಗಡೆ ಮಾಡಲು ಅದಕ್ಕೆ ಅದರದೇ ಆದ ರೀತಿ-ರಿವಾಜುಗಳಿರುತ್ತವೆ. ಎಲ್ಲಾ ರಾಜ್ಯಗಳನ್ನು ಒಂದೇ ರೀತಿಯಲ್ಲಿ ಪರಿಗಣಿಸುತ್ತಿದ್ದೇವೆ. ಕರ್ನಾಟಕವನ್ನು ಕಡೆಗಣಿಸಿಲ್ಲ. ರಾಜ್ಯಕ್ಕೆ ಎಷ್ಟು ಪರಿಹಾರ ಬರಬೇಕೋ ಅಷ್ಟೂ ಸಿಕ್ಕೇ ಸಿಗುತ್ತದೆ ಎಂದರು.
ತ್ರಿವಳಿ ತಲಾಖ್ ಮಸೂದೆ, 370ನೇ ವಿಧಿ ರದ್ದುಗೊಳಿಸಿದರೆ ದೇಶದಲ್ಲಿ ಅನಾಹುತಗಳು ಜರುಗುವ ಸಂಭವಿಸುತ್ತವೆ ಎಂದು ಕೆಲವರು ಹೇಳುತ್ತಿದ್ದರು. ಆದರೆ, ದೇಶದಲ್ಲಿ ಏನೂ ಆಗಿಲ್ಲ. ಎಲ್ಲವೂ ಶಾಂತಿಯುತವಾಗಿಯೇ ಇದೆ. ಕಾಶ್ಮೀರದಲ್ಲಿಯೂ ಶಾಂತಿ ನೆಲೆಸಿದೆ. ಈ ರೀತಿಯ ಖಡಕ್ ನಿರ್ಧಾರಗಳನ್ನು ಕೈಗೊಂಡಿದ್ದಕ್ಕೆ ಸಹಿಸಲು ಆಗದವರು ಮಾತ್ರ ವಿರೋಧಿಸಿದರು ಎಂದು ಆರೋಪಿಸಿದರು.
ದೇಶದಲ್ಲಿ ಅರ್ಥವ್ಯವಸ್ಥೆಯೂ ಉತ್ತಮವಾಗಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಉದ್ಯಮ ವಲಯಗಳ ಜೊತೆ ಸಭೆ ನಡೆಸಿದ್ದಾರೆ. ಅಲ್ಲದೆ, ಸಾರ್ವಜನಿಕರಿಗೆ ಅನೂಕುಲವಾಗಲು ಸಾಲ ಮೇಳ ಆಯೋಜಿಸುತ್ತಿದ್ದೇವೆ. ಅ. 3ರಿಂದ ಈ ಮೇಳ ನಡೆಯಲಿದೆ. ಎಂಎಸ್ಎಂಇ ಸೆಕ್ಟರ್ಗಳ ಜಿಎಸ್ಟಿ ಬಾಕಿ ಹಣವನ್ನ ನೀಡಲು ಒಂದು ತಿಂಗಳು ಕಾಲಾವಕಾಶ ನೀಡಲಾಗಿದೆ ಎಂದು ವಿವರಿಸಿದರು.
ಆರ್ಥಿಕ ಉತ್ತೇಜನಕ್ಕೆ ಕಾರ್ಪೋರೇಟ್ ತೆರಿಗೆಯನ್ನು ಶೇ. 30ರಿಂದ 22ಕ್ಕೆ ಇಳಿಸಿದ್ದೇವೆ. ಭಾರತ ವಿಶ್ವದ ದೊಡ್ಡ ಅರ್ಥವ್ಯವಸ್ಥೆಯ ರಾಷ್ಟ್ರವಾಗುವುದಕ್ಕೆ ಮುನ್ನುಡಿ ಬರೆದಿದ್ದು, ಅದಕ್ಕಾಗಿ 5 ಟ್ರಿಲಿಯನ್ ಡಾಲರ್ ಅರ್ಥವ್ಯವಸ್ಥೆ ಗುರಿ ಹೊಂದಿದ್ದೇವೆ. ಪ್ರಸ್ತುತ ಜಿಡಿಪಿ ಎಷ್ಟಿದೆ ಎಂಬುದುರ ಬಗ್ಗೆ ಉತ್ತರ ನೀಡಲು ಠಾಕೂರ್ ನಿರಾಕರಿಸಿದರು.