ಹುಬ್ಬಳ್ಳಿ: ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆಯಲ್ಲಿ ಕಮಲ ಅರಳಿಸಲು ಹೆಣಗಾಡುತ್ತಿರುವ ಬಿಜೆಪಿ ನಾಯಕರು ಈಗ ಮೇಯರ್ ಗಾದಿಗಾಗಿ ಮುಸುಕಿನ ಗುದ್ದಾಟ ಆರಂಭಿಸಿದ್ದಾರೆ. ಮೇಯರ್ ಸ್ಥಾನ 2ಎ ಗೆ ಮೀಸಲಾಗಿದ್ರೆ, ಉಪಮೇಯರ್ ಸ್ಥಾನ ಎಸ್ಸಿ ಮಹಿಳೆಗೆ ಮೀಸಲಾಗಿದ್ದು, ಮೇಯರ್ ಗದ್ದುಗೆಗೆ ಭಾರಿ ಕಸರತ್ತು ನಡೆದಿದೆ. ಪ್ರಹ್ಲಾದ್ ಜೋಶಿ, ಜಗದೀಶ್ ಶೆಟ್ಟರ್, ಬೆಲ್ಲದ್ ನಡುವೆ ಟಿಕೆಟ್ ಹಂಚಿಕೆ ವಿಚಾರದಲ್ಲೂ ಮನಸ್ತಾಪವಿತ್ತು. ಇದು ಮೇಯರ್ ಆಯ್ಕೆಯಲ್ಲೂ ಮುಂದುವರಿದಿದೆ.
ನಾಯಕರ ನಡುವೆ ಸಮನ್ವಯದ ಕೊರತೆ?
ಈ ನಾಯಕರ ನಡುವಿನ ಸಮನ್ವಯದ ಕೊರತೆಯಿಂದ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಮುಗ್ಗರಿಸಿದೆ. ಈಗ ನಾಯಕರು ತಮ್ಮ ತಮ್ಮ ಬೆಂಬಲಿಗರನ್ನ ಮೇಯರ್ ಮಾಡಲು ಜಿದ್ದಿಗೆ ಬಿದಿದ್ದಾರೆ. ಪ್ರಹ್ಲಾದ್ ಜೋಶಿ ಬೆಂಬಲಿಗ ಈಶ್ವರ ಅಂಚಟಗೇರಿ, ಜಗದೀಶ್ ಶೆಟ್ಟರ್ ಬೆಂಬಲಿಗ ತಿಪ್ಪಣ್ಣ ಮಜ್ಜಗಿ, ಅರವಿಂದ ಬೆಲ್ಲದ್ ಬೆಂಬಲಿಗ ರಾಮಣ್ಣ ಬಡಿಗೇರ್ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ.
ಇದನ್ನೂ ಓದಿ: ಗೆದ್ದ ಕುರ್ಚಿ ಹಿಡಿಬೇಕಂತಾ ಕಾರ್ಪೊರೇಟರ್‌ಗಳೇನೋ ಆಗ್ಯಾರ್‌ರೀ.. ಆದ್ರಾ, ಹು-ಧಾ ಪಾಲಿಕೆಯೊಳಗ್ ಕುರ್ಚಿನೇ ಇಲ್ನೋಡ್ರೀ..
ಮೇಯರ್ ಸ್ಥಾನ ಧಾರವಾಡಕ್ಕೆ ಬಿಟ್ಟು ಕೊಟ್ರೆ ಈಶ್ವರ ಅವರಿಗೆ ಬಂಪರ್ ಹೊಡೆಯಲಿದೆ. ಹುಬ್ಬಳ್ಳಿಗಾದ್ರೆ ತಿಪ್ಪಣ್ಣ ಸಾಧ್ಯತೆ ಹೆಚ್ಚಾಗಿದೆ. ಆದರೆ, ಮೇಯರ್ ಆಯ್ಕೆ ದಿನಾಂಕ ಘೋಷಣೆಗೂ ಮುನ್ನ ಭಾರಿ ಕಸರತ್ತು ಶುರುವಾಗಿದ್ದು, ಮೆಯರ್ ಆಯ್ಕೆ ಬಿಜೆಪಿಯಲ್ಲಿ ಕಗ್ಗಂಟಾಗಿದೆ.
ಇವರಿಗೇ ಮೇಯರ್ ಸ್ಥಾನ ನೀಡಬೇಕೆಂದು ಪಟ್ಟು
ಇನ್ನು ಸಚಿವ ಸ್ಥಾನವು ಸಿಗದೆ ಮುನಿಸಿಕೊಂಡಿರುವ ಅರವಿಂದ ಬೆಲ್ಲದ್ ತಮ್ಮ ಬೆಂಬಲಿಗರಿಗೆ ಮೇಯರ್ ಸ್ಥಾನ ನೀಡುವಂತೆ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಇದರ ನಡುವೆ ಪಟ್ಟು ಸಡಿಲಿಸಲು ಜಗದೀಶ್ ಶೆಟ್ಟರ್ ಮುಂದಾಗಿದ್ದಾರೆ ಎನ್ನಲಾಗಿದ್ದು, ಇಬ್ಬರು ನಾಯಕರ ಜಿದ್ದಿನ ನಡುವೆ ಜೋಶಿ ಬೆಂಬಲಿಗ ಈಶ್ವರ ಅಂಚಟಗೇರಿ ಮೇಯರ್ ಸ್ಥಾನ ಒಲಿದು ಬರುವ ಸಾಧ್ಯತೆ ಹೆಚ್ಚಿದೆ.