ಹುಬ್ಬಳ್ಳಿ: ಕಲ್ಯಾಣ ಕರ್ನಾಟಕದ ಬೆಳಗಾವಿ ವಿಭಾಗದಲ್ಲಿ ಸರ್ಕಾರಿ ನೌಕರರಿಗೆ ಶೇ.8ರಷ್ಟು ನೇಮಕಾತಿ ಮತ್ತು ಮುಂಬಡ್ತಿ ಮೀಸಲಾತಿಯನ್ನು ರಾಜ್ಯ ಸರ್ಕಾರ ನೀಡಬೇಕೆಂದು ಅಹಿಂದ ಚಿಂತಕರ ವೇದಿಕೆಯ ರಾಜಾಧ್ಯಕ್ಷ ಸೈಬಣ್ಣಾ ಜಮಾದಾರ್ ಒತ್ತಾಯಿಸಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಲಂ ಜೆ.371 ಮುಂಬಡ್ತಿ ನಿಯಮಗಳು ಕಲ್ಯಾಣ ಕರ್ನಾಟಕ ಭಾಗಕ್ಕೆ ಮಾರಕವಾಗಿ ಪರಿಣಮಿಸಿರುವುದು ಬೇಸರದ ಸಂಗತಿಯಾಗಿದೆ. ಈ ಭಾಗದ ಕಂದಾಯ ಇಲಾಖೆ, ಪೋಲಿಸ್ ಇಲಾಖೆ, ಶಿಕ್ಷಣ ಇಲಾಖೆ, ಸಾರಿಗೆ ಇಲಾಖೆ, ಪಂಚಾಯತ್ ರಾಜ್ ಇಲಾಖೆ ಹೀಗೆ ಹಲವಾರು ಇಲಾಖೆಗಳಲ್ಲಿನ ಸರ್ಕಾರಿ ನೌಕರರು ಜೇಷ್ಠತಾ ಪಟ್ಟಿಯನ್ವಯ 8-12 ವರ್ಷ ಹಿರಿಯರಿದ್ದರೂ ಮುಂಬಡ್ತಿ ಸಿಗುತ್ತಿಲ್ಲ. ಈ ಬಗ್ಗೆ ಕೇಳಿದಾಗ 371ಜೆ ಕಲಂ ತೋರಿಸುವ ಮೂಲಕ ಕತ್ತು ಹಿಸುಕುವ ಕೆಲಸವನ್ನು ಹಿರಿಯ ಅಧಿಕಾರಿಗಳು ಮಾಡುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು.
ಕಲ್ಯಾಣ ಕರ್ನಾಟಕವು ನಮ್ಮ ರಾಜ್ಯದಲ್ಲಿಯೇ ಅತೀವ ಹಿಂದುಳಿದ ಪ್ರದೇಶವಾಗಿದೆ. ಅದಲ್ಲದೆ ಕಲಂ 371ಜೆ ಮುಂಬಡ್ತಿ ನಿಯಮಗಳಿಂದ ಈ ಭಾಗದ ಸರ್ಕಾರಿ ನೌಕರರಿಗೆ ತುಂಬಾ ಅನ್ಯಾಯವಾಗಿದೆ. ಕಲಂನ್ನು ಸಮರ್ಪಕವಾಗಿ ಜಾರಿಗೊಳಿಸದೇ ನಮಗೆ ವಂಚನೆ ಮಾಡುತ್ತಿರುವುದು ಖಂಡನೀಯ ಎಂದರು.
ಈ ಬಗ್ಗೆ ಸರ್ಕಾರದ ಗಮನಕ್ಕೆ ಹಲವು ಬಾರಿ ತಂದರೂ ಸಹ ಯಾವುದೇ ಸ್ಪಂದನೆ ದೊರೆಯುತ್ತಿಲ್ಲ. ಇದು ನಮ್ಮ ಭಾಗದ ದುರ್ದೈವದ ಸಂಗತಿ, ಕೂಡಲೇ ನಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸದಿದ್ದರೆ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.