ಹುಬ್ಬಳ್ಳಿ: ನೋವು ಕೊಟ್ಟವರೇ ಮಾರ್ಗದರ್ಶಕರು, ಕಷ್ಟ ಕೊಟ್ಟವರೇ ಹಿತೈಷಿಗಳು, ಕಾಲು ಎಳೆದು ದೂರ ತಳ್ಳಿದವರೇ ನಮ್ಮ ಬಂಧುಗಳು ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಹು-ಧಾ ಮಹಾನಗರ ಕಾಂಗ್ರೆಸ್ ಘಟಕ ಮತ್ತು ಧಾರವಾಡ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಘಟಕದಿಂದ ನಗರದ ಗೋಕುಲ ಗಾರ್ಡನ್ನಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾಂಗ್ರೆಸ್ ಶಕ್ತಿ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಧಿಕಾರದ ಆಸೆಯಿಂದ ಹುಬ್ಬಳ್ಳಿಗೆ ಬಂದಿಲ್ಲ. ನನ್ನ ಹಿಂದಿನ ಗುಟ್ಟು, ಈಗಿನ ಗುಟ್ಟು ಹಾಗೂ ಮುಂದಿನ ಗುಟ್ಟನ್ನು ಜನರಿಗೆ ತಿಳಿಸುವುದು ಬಾಕಿ ಇದೆ. ನಾನು ತಿಹಾರ್ ಜೈಲಿನಲ್ಲಿದ್ದಾಗ ಯಾರ್ಯಾರು ಏನು ಹೇಳಿದ್ದಾರೆ ಎಂಬ ಅರಿವಿದೆ. ಅವರಿಗೆಲ್ಲಾ ಉತ್ತರ ಕೊಡುವ ಶಕ್ತಿ ನನಲ್ಲಿ ಇದೆ ಎಂದರು.
ನನ್ನ ಬಂಧನದ ಮುಂಚೆ ತಂದೆಯ ಪೂಜೆ ಇದ್ದಾಗ ಕಣ್ಣೀರು ಹಾಕಿದ್ದಕ್ಕೆ ಹಲವು ಜನ ವಿವಿಧ ವ್ಯಾಖ್ಯಾನ ನೀಡಿದ್ದಾರೆ. ಅದರಲ್ಲಿ ಕೆಲವರು ಉಪ್ಪು ತಿಂದವರು ನೀರು ಕುಡಿಯಲೇಬೇಕು ಅಂತ ಹೇಳಿದ್ದಾರೆ. ನಿಜಾ, ಉಪ್ಪು ತಿನಿಸುತ್ತೇನೆ, ಅಲ್ಲದೇ ನೀರು ಕೂಡ ಕುಡಿಸುವೆ ಎಂದರು.
ಇನ್ನು ತಿಹಾರ್ ಜೈಲಿನಲ್ಲಿ ಇದ್ದಾಗ ರಾಜ್ಯದ ಎಲ್ಲಾ ಅಭಿಮಾನಿಗಳು, ಕಾರ್ಯಕರ್ತರು ನನ್ನ ನೋವನ್ನು ತಮ್ಮ ನೋವು ಎಂದು ತಿಳಿದು ಪ್ರಾರ್ಥನೆ ಮಾಡಿದ್ದಾರೆ. ಅಲ್ಲದೇ ನನ್ನನ್ನು ತಮ್ಮ ಕುಟುಂಬದ ಸದಸ್ಯ ಎಂದು ತಿಳಿದು ಹೋರಾಟ ಮಾಡಿದ್ದಾರೆ. ಅವರ ಹೋರಾಟದ ಫಲವೇ ಇದೀಗ ಬಿಡುಗಡೆಯಾಗಿದ್ದೇನೆ. ಆಗ ನನ್ನ ಬಗ್ಗೆ ಹೇಳಿಕೆ ಕೊಟ್ಟವರ ಕುರಿತು ಗಮನಿಸಿದ್ದೇನೆ. ಚದುರಂಗದ ಆಟದ ಬಗ್ಗೆ ಅರಿವಿದೆ. ಇವರಿಗೆಲ್ಲಾ ಉತ್ತರ ಕೊಟ್ಟೇ ಕೊಡುವೆ. ಮಾತಿಗೆ ಒಂದು ಅರ್ಥ ಇದ್ದರೆ, ಮೌನಕ್ಕೆ ನೂರಾರು ಅರ್ಥ. ಹಾಗಾಗಿ ಹೆಚ್ಚಿಗೆ ಮಾತನಾಡುವುದನ್ನು ಬಿಟ್ಟು ಕೆಲಸ ಹೆಚ್ಚಿಗೆ ಮಾಡಬೇಕು ಎಂದರು.
ಮಹದಾಯಿ ವಿಚಾರದಲ್ಲಿ ಮತದಿಂದ ಉತ್ತರ ಕೊಡಿ:
ಉತ್ತರ ಕರ್ನಾಟಕ ಭಾಗದ ಜನರ ಹಲವಾರು ವರ್ಷಗಳ ಬೇಡಿಕೆ ಆಗಿರುವ ಮಹದಾಯಿ ವಿಚಾರವಾಗಿ ಬಿಜೆಪಿಯ ಈ ಭಾಗದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಸಚಿವ ಜಗದೀಶ್ ಶೆಟ್ಟರ್, ಸಂಸದ ಸುರೇಶ್ ಅಂಗಡಿ ಸೇರಿದಂತೆ ಹಲವಾರು ನಾಯಕರು ಅಧಿಕಾರದಲ್ಲಿ ಇದ್ದಾರೆ. ಅವರು ಐದು ನಿಮಿಷಗಳಲ್ಲಿ ಗೆಜೆಟ್ ನೋಟಿಫೀಕೇಶನ್ ಹೊರಡಿಸಬೇಕಿತ್ತು. ಆದರೆ ನೂರು ದಿನ ಕಳೆದರೂ ಕೂಡ ಯಾರೊಬ್ಬರು ಈ ಬಗ್ಗೆ ಕಾಳಜಿ ತೋರಿಲ್ಲ. ಹೀಗಾಗಿ ಜನರು ತಮ್ಮ ಮತಗಳ ಮೂಲಕ ಈ ಭಾಗದ ನಾಯಕರಿಗೆ ಉತ್ತರ ಕೊಡಬೇಕು ಎಂದರು.
ಕಾಂಗ್ರೆಸ್ ಅನರ್ಹ ಶಾಸಕರನ್ನು 30, 40 ವರ್ಷಗಳಿಂದ ಸಾಕಿ ದೊಡ್ಡವರನ್ನಾಗಿ ಮಾಡಿ, ಶಾಸಕರನ್ನಾಗಿ ಮಾಡಿದ್ದರೂ ಕೂಡ ಪಕ್ಷಕ್ಕೆ ದ್ರೋಹ ಬಗೆದು ಹೋಗಿದ್ದಾರೆ. ಇನ್ನು ಬಿಜೆಪಿಯವರನ್ನು ಬಿಡುತ್ತಾರಾ? ಸರ್ಕಾರದ ಅಂತ್ಯದ ಬಗ್ಗೆ ಮಾತಾಡಲ್ಲ. ಆದ್ರೆ ಚಕ್ರ ತಿರುಗಿಸುವುದು ಗೊತ್ತಿದೆ ಎಂದರು.