ಹುಬ್ಬಳ್ಳಿ (ಧಾರವಾಡ): ನಗರದ ಲ್ಯಾಮಿಂಗ್ಟನ್ ರಸ್ತೆ ನೆಹರೂ ಮೈದಾನದ ಬಳಿ ಕಳೆದ ಶನಿವಾರ ನಸುಕಿನ ಜಾವ ಚಿಂದಿ ಆಯುವ ಸುಮಾ ಎಂಬಾಕೆಯನ್ನು ಕಲ್ಲಿನಿಂದ ಜಜ್ಜಿ ಭೀಕರವಾಗಿ ಹತ್ಯೆ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಶಹರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಹಣಕ್ಕಾಗಿ ರಸ್ತೆ ಬದಿ ಮಲಗುವವರನ್ನೇ ಟಾರ್ಗೆಟ್ ಮಾಡಿಕೊಂಡು ವ್ಯಕ್ತಿಯೊಬ್ಬ ಕೊಲೆ ಮಾಡಿದ್ದಾನೆ. ಈ ಹಿಂದೆಯೂ ಈತ ಇಂತಹ ಕೊಲೆ ಮಾಡಿದ್ದಾನೆ ಎಂಬುದು ತನಿಖೆಯಿಂದ ತಿಳಿದು ಬಂದಿದೆ. ಶನಿವಾರದಂದು ದಾವಣಗೆರೆ ಮೂಲದ ಚಿಂದಿ ಆಯುವ ಸುಮಾ ಹಾಗೂ ಆಕೆಯ ಗಂಡ ರಸ್ತೆ ಬದಿ ಮಲಗಿದ್ದರು. ಹಣಕ್ಕಾಗಿ ಇವರ ಮೇಲೆ ದಾಳಿ ಮಾಡಿದ ಆರೋಪಿ ಸುಮಾಳನ್ನು ಕೊಲೆ ಮಾಡಿದ್ದ. ಅವರ ಗಂಡ ಸುರೇಶ ಕಂಠಪೂರ್ತಿ ಕುಡಿದಿದ್ದರಿಂದ ಆತನಿಗೂ ಹಲ್ಲೆ ಮಾಡಿ ಆತನಿಂದಲೂ ಹಣ ಕಿತ್ತು ಪರಾರಿಯಾಗಿದ್ದ.
ಇದನ್ನೂ ಓದಿ: ಬೆಳಗಾವಿ: ಸೇನಾ ಸಮವಸ್ತ್ರದಲ್ಲೇ ಚಿತ್ರಮಂದಿರಕ್ಕೆ ಆಗಮಿಸಿದ ನಿವೃತ್ತ ಯೋಧ
ಈ ಕುರಿತು ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಡಿಸಿಪಿ ಸಾಹಿಲ್ ಬಾಗ್ಲಾ , ಎಸಿಪಿ ಆರ್.ಕೆ ಪಾಟೀಲ್ ನೇತೃತ್ವದ ತಂಡ ಸಿಸಿಟಿವಿ ದೃಶ್ಯದ ಜಾಡು ಹಿಡಿದು ತನಿಖೆ ಆರಂಭಿಸಿತ್ತು. ಅದರಲ್ಲಿ ಸಿಕ್ಕ ಪೋಟೋವನ್ನು ಸುಮಾರು1,500 ಜನರಿಗೆ ತೋರಿಸಲಾಗಿದೆ. ಅದರಲ್ಲಿ ಭಿಕ್ಷುಕನೊಬ್ಬ ಆರೋಪಿ ಗುರುತಿಸಿ ಆತನ ವಿಳಾಸ ತಿಳಿಸಿದ್ದ. ಆರೋಪಿ ಧಾರವಾಡ ಮೂಲದ (ಚಿಂದಿ ಆಯುವವ)ವನಾಗಿದ್ದು, ಆತನನ್ನು ಮಹಾರಾಷ್ಟ್ರದ ಮೀರಜ್ನಲ್ಲಿ ಅರೆಸ್ಟ್ ಮಾಡಿ ಪೊಲೀಸ್ ತಂಡ ಹುಬ್ಬಳ್ಳಿಯಲ್ಲಿ ವಿಚಾರಣೆ ನಡೆಸುತ್ತಿದೆ.