ಚಿತ್ರದುರ್ಗ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಾಳೆ ನಡೆಸುತ್ತಿರುವ 'ಭಾರತ್ ಬಂದ್'ಗೆ ಎಲ್ಲಾ ಪ್ರಗತಿಪರ ಸಂಘಟನೆಗಳು ಬೆಂಬಲ ನೀಡಿವೆ ಎಂದು ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ನೆಲೇನೂರು ಶಂಕರಪ್ಪ ತಿಳಿಸಿದ್ದಾರೆ.
ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ರೈತರನ್ನು ತುಳಿಯುವ ಕಾಯ್ದೆಗಳನ್ನು ಜಾರಿಗೆ ತರಲು ಹೊರಟಿದೆ. ಹೀಗಾಗಿ ನಾಳೆ ಭಾರತ್ ಬಂದ್ಗೆ ಕರೆ ನೀಡಿದ್ದು, ಕೋಟೆನಾಡಿನಲ್ಲಿ ಬಂದ್ ಕಾವು ಹೆಚ್ಚಾಗಿರುತ್ತದೆ ಎಂದರು. ಇನ್ನು ನಾಳೆ ಬೆಳಗಿನ ಜಾವ 6 ಗಂಟೆಯಿಂದ ಚಿತ್ರದುರ್ಗ ಬಂದ್ ಆಗಲಿದ್ದು, ವಿವಿಧ ಸಂಘಟನೆಗಳು, ಆಟೋ ಚಾಲಕರ ಸಂಘ, ವಿವಿಧ ರೈತಪರ ಸಂಘಟನೆಗಳು, ಲಾರಿ ಮಾಲೀಕರ ಸಂಘಟನೆಗಳು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸೇರಿದಂತೆ ಹಲವು ಪ್ರಗತಿಪರ ಸಂಘಟನೆಗಳು ಬಂದ್ಗೆ ಕೈಜೋಡಿಸಿವೆ ಎಂದರು.
ದಾವಣಗೆರೆ: ಇನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ನಡೆಸುತ್ತಿರುವ ಭಾರತ ಬಂದ್ಗೆ ಬೆಂಬಲಿಸುವಂತೆ ರೈತರು ಇಂದು ಕಾಲ್ನಡಿಗೆ ಜಾಥಾ ಹಮ್ಮಿಕೊಂಡಿದ್ದರು.
ನಾಳಿನ ಭಾರತ್ ಬಂದ್ ಅಂಗವಾಗಿ ಇಂದು ಹಮ್ಮಿಕೊಂಡಿದ್ದ ಬೈಕ್ ರ್ಯಾಲಿ ನಡೆಸಲು ಪೊಲೀಸರು ಬಿಡದ ಕಾರಣ ನಗರದ ಜಯದೇವ ಸರ್ಕಲ್ನಿಂದ ವಿವಿಧ ವೃತ್ತಗಳಲ್ಲಿ ಕಾಲ್ನಡಿಗೆ ಜಾಥಾ ನಡೆಸಲಾಯಿತು. ಈ ವೇಳೆ ಬಂದ್ಗೆ ಬೆಂಬಲಿಸುವಂತೆ ಅಂಗಡಿ ಮಾಲೀಕರು ಹಾಗೂ ಸಾರ್ವಜನಿಕರಲ್ಲಿ ಮನವಿ ಮಾಡಲಾಯಿತು.
ಈ ಕಾಲ್ನಡಿಗೆ ಜಾಥಾದಲ್ಲಿ ರೈತ ಸಂಘಟನೆಗಳು, ಆರ್ಕೆಎಸ್, ಎಐಟಿಯುಸಿ, ಎಎಪಿ ಸೇರಿದಂತೆ ದಾವಣಗೆರೆಯ 20ಕ್ಕೂ ಹೆಚ್ಚು ಸಂಘಟನೆಗಳು ಭಾಗಿಯಾಗಿದ್ದವು.