ತುಮಕೂರು/ದಾವಣಗೆರೆ: ಸ್ವತಃ ಪ್ರಧಾನಿ ನರೇಂದ್ರ ಮೋದಿಯವರು ಲಸಿಕೆ ಪಡೆಯುವ ಮೂಲಕ ಮೂರನೇ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದ್ದು, ರಾಜ್ಯದಲ್ಲಿಯೂ ಸಹ 60 ವರ್ಷ ಮೇಲ್ಪಟ್ಟ ನಾಗರಿಕರು ಮತ್ತು ಕೋವಿಡ್ನಿಂದ ಗುಣಮುಖರಾದವರಿಗೆ ಉಚಿತ ವ್ಯಾಕ್ಸಿನ್ ನೀಡಲಾಗುತ್ತಿದೆ.
ಸರ್ಕಾರಿ ಆಸ್ಪತ್ರೆಯಲ್ಲಿ ಇಂದಿನಿಂದ ಸಾರ್ವಜನಿಕರಿಗೆ ವ್ಯಾಕ್ಸಿನ್ ನೀಡುವಿಕೆಗೆ ಚಾಲನೆ ನೀಡಲಾಯಿತು. ಹಿರಿಯ ನಾಗರಿಕರು, ಪೊಲೀಸ್ ಸಿಬ್ಬಂದಿ ಹಾಗೂ ಕೋವಿಡ್ ಸೋಂಕಿನಿಂದ ಬಳಲಿ ಚಿಕಿತ್ಸೆ ಪಡೆದವರು ವ್ಯಾಕ್ಸಿನ್ ಪಡೆದರು.
"ನವೆಂಬರ್ ತಿಂಗಳಲ್ಲಿ ಕೊರೊನಾ ಸೋಂಕು ತಗುಲಿತ್ತು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದೆ. ನಂತರ ಸುಧಾರಿಸಿಕೊಂಡು ಇದೀಗ ಸರ್ಕಾರ ಉಚಿತವಾಗಿ ನೀಡುತ್ತಿರೋ ವ್ಯಾಕ್ಸಿನ್ ಪಡೆದಿದ್ದೇನೆ. ಅಲ್ಲದೆ ವ್ಯಾಕ್ಸಿನ್ ತೆಗೆದುಕೊಂಡ ನಂತರ ದೇಹದಲ್ಲಿ ಯಾವದೇ ರೀತಿಯ ಏರುಪೇರು ಉಂಟಾಗಿಲ್ಲ." ಎಂದು ಬಸವರಾಜ ಎಂಬುವರು ತಿಳಿಸಿದರು.
ಮೂರನೇ ಹಂತದ ಕರೊನಾ ಲಸಿಕೆ ಕಾರ್ಯಕ್ಕೆ ದಾವಣಗೆರೆಯಲ್ಲಿ ಚಾಲನೆ
ಬೆಣ್ಣೆ ನಗರಿ ದಾವಣಗೆರೆಯಲ್ಲೂ ಮೂರನೇ ಹಂತದ ಕೋವಿಡ್ ಲಸಿಕಾ ಅಭಿಯಾನಕ್ಕೆ ಚಾಲನೆ ದೊರೆತಿದೆ. ಮೇಯರ್ ಎಸ್.ಟಿ. ವೀರೇಶರವರಿಗೆ ಮೊದಲ ಲಸಿಕೆ ನೀಡುವ ಮೂಲಕ ಚಾಲನೆ ನೀಡಲಾಯಿತು.
ಲಸಿಕೆ ಪಡೆದ 60 ವರ್ಷ ಮೇಲ್ಪಟ್ಟ ನಾಗರಿಕರು ಸೇರಿದಂತೆ ಫ್ರಂಟ್‌ಲೈನ್ ವಾರಿಯರ್ಸ್ ಕೂಡ ಹೆಮ್ಮೆಯಿಂದ ಲಸಿಕೆ ಪಡೆದು, ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿರುವ ಕೆಲವರಿಗೆ ಸಂದೇಶ ರವಾನಿಸಿದರು. 60 ವರ್ಷ ಮೇಲ್ಪಟ್ಟ ಸಾರ್ವಜನಿಕರಿಗೆ ಉಚಿತ ಲಸಿಕೆ ನೀಡಲಾಗುತ್ತಿದ್ದು, ಗಂಭೀರ ಸ್ವರೂಪದ ಕಾಯಿಲೆಗಳಿಂದ ಬಳಲುತ್ತಿರುವ 45 ರಿಂದ 59 ವರ್ಷದವರಿಗೂ ಉಚಿತವಾಗಿ ಕೊವಿಶೀಲ್ಡ್ ಲಸಿಕೆ ಹಾಕಲಾಯಿತು.