ದಾವಣಗೆರೆ, ಧಾರವಾಡ, ಕೊಡಗು: ಇಂದು ಖಾಸಗಿ ಆಸ್ಪತ್ರೆಗಳ ವೈದ್ಯರು ರಾಷ್ಟ್ರೀಯ ವೈದ್ಯಕೀಯ ಮಸೂದೆ ವಿರೋಧಿಸಿ ಮುಷ್ಕರಕ್ಕೆ ಕರೆ ಕೊಟ್ಟ ಹಿನ್ನೆಲೆಯಲ್ಲಿ ದಾವಣಗೆರೆ, ಧಾರವಾಡ, ಕೊಡಗು ಸೇರಿ ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಲಾಯಿತು.
ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ರಾಷ್ಟ್ರೀಯ ವೈದ್ಯಕೀಯ ಆಯೋಗ ವಿಧೇಯಕಕ್ಕೆ ದಾವಣಗೆರೆಯಲ್ಲಿ ಭಾರತೀಯ ವೈದ್ಯಕೀಯ ಸಂಘ ವಿರೋಧ ವ್ಯಕ್ತಪಡಿಸಿದ್ದು, ಜಿಲ್ಲೆಯ ಖಾಸಗಿ ವೈದ್ಯರು ಬೆಂಬಲ ನೀಡಿದರು. ಬೆಳಗ್ಗೆಯಿಂದಲೇ ಖಾಸಗಿ ಆಸ್ಪತ್ರೆಗಳ ಸೇವೆ ಬಂದ್ ಆಗಿದ್ದು, ವೈದ್ಯರು ಆಸ್ಪತ್ರೆ ಬಂದ್ ಮಾಡಿ ಬಾಪೂಜಿ ಆಸ್ಪತ್ರೆ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ ಕೇಂದ್ರ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಘೋಷಣೆಗಳನ್ನು ಕೂಗಿ, ಎನ್ಎಂಸಿ ಜಾರಿ ಮಾಡದಂತೆ ಒತ್ತಾಯಿಸಿದರು.
ಧಾರವಾಡ ನಗರದಲ್ಲೂ ಬೀದಿಗಿಳಿದ ವೈದ್ಯರು ಪ್ರತಿಭಟನೆ ನಡೆಸಿದರು. ಸುಮಾರು 60 ಕ್ಕೂ ಹೆಚ್ಚು ಓಪಿಡಿಗಳು ಬಂದ್ ಆಗಿದ್ದವು. ನಗರದಲ್ಲಿರುವ 100 ಖಾಸಗಿ ಆಸ್ಪತ್ರೆಗಳ ಪೈಕಿ, 60 ಕ್ಕೂ ಹೆಚ್ಚು ಓಪಿಡಿಗಳು ಬಂದ್ ಆಗಿದ್ದರಿಂದ ರೋಗಿಗಳು ಚಿಕೆತ್ಸೆ ಇಲ್ಲದೆ ಪರದಾಡುವಂತಾಯಿತು.
ದೇಶವ್ಯಾಪಿ ಐಎಂಎ ಹಮ್ಮಿಕೊಂಡಿರುವ ರಾಷ್ಟ್ರೀಯ ವೈದ್ಯಕೀಯ ಮಸೂದೆ ವಿರೋಧಿಸಿ ಹೋರಾಟಕ್ಕೆ ಕೊಡಗು ಜಿಲ್ಲೆಯಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿಯಿತು. ತುರ್ತು ಚಿಕಿತ್ಸೆ ಹೊರತುಪಡಿಸಿ, ಬೆಳಿಗ್ಗೆ 6 ಗಂಟೆಯಿಂದ ನಾಳೆ ಬೆಳಿಗ್ಗೆ 6 ರವರೆಗೆ ಉಳಿದ ಎಲ್ಲಾ ರೀತಿಯ ಸೇವೆಗಳನ್ನು ಬಂದ್ ಮಾಡಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಹೊರ ರೋಗಿ ವಿಭಾಗ (ಓಪಿಡಿ) ಬಂದ್ ಮಾಡಿರುವ ಹಿನ್ನಲೆಯಲ್ಲಿ ರೋಗಿಗಳು ಸರ್ಕಾರಿ ಆಸ್ಪತ್ರೆಗಳಿಗೆ ತೆರಳಿದ್ದು ಕಂಡು ಬಂದಿತು.