ದಾವಣಗೆರೆ: ಕೇಂದ್ರ ಸರ್ಕಾರದ ಎಲ್ಲಾ ಯೋಜನೆಗಳನ್ನು ಉತ್ತರ ಭಾರತಕ್ಕೆ ಮಾತ್ರ ನೀಡಬೇಡಿ, ಇಲ್ಲಿ ದಕ್ಷಿಣ ಭಾರತ ಕೂಡ ಇದೆ ಎಂದು ಕೇಂದ್ರಕ್ಕೆ ಮನವಿ ಮಾಡಿರುವುದಾಗಿ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಖಾತೆ ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ ತಿಳಿಸಿದರು.
ದಾವಣಗೆರೆಯಲ್ಲಿರುವ ಸಿಆರ್ಸಿ ಕೇಂದ್ರಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ಚಿತ್ರದುರ್ಗದಲ್ಲಿ ಸಿಎಸ್ ಸೆಂಟರ್ ನಿರ್ಮಾಣ ಮಾಡಲು ಜಮೀನು ನೋಡುತ್ತಿದ್ದೇವೆ. ಜೊತೆಗೆ ಕಾಂಪೋನೆಂಟ್ ತಯಾರು ಮಾಡುವ ಕಾರ್ಖಾನೆ ಕೂಡ ಮಾಡಬೇಕೆಂಬ ಯೋಜನೆ ಇದೆ. 36 ಕೋಟಿ ರೂ.ಗಳ ಯೋಜನೆ ರೂಪಿಸಿದ್ದು, ಟೆಂಡರ್ ಕರೆಯಬೇಕು ಎಂದರು.
ಸಾಮಾಜಿಕ ನ್ಯಾಯ ಹಾಗು ಸಬಲೀಕರಣ ಇಲಾಖೆ ಇಡೀ ದೇಶದಲ್ಲಿ ಅನೇಕ ಯೋಜನೆಗಳನ್ನು ತಂದಿದೆ. ದಿವ್ಯಾಂಗರಿಗೆ ಚಿಕಿತ್ಸೆ ನೀಡಲು, ಪಿಹೆಚ್ಡಿ ಮಾಡುವವರಿಗೆ ತರಬೇತಿ ನೀಡಲು ಸಿಆರ್ಸಿ ಸೆಂಟರ್ ಇದೆ. ಈ ಸಿಆರ್ಸಿ ಕೇಂದ್ರ ದಕ್ಷಿಣ ಭಾರತದಲ್ಲಿ ಆಂಧ್ರಪ್ರದೇಶ ಬಿಟ್ಟರೆ ದಾವಣಗೆರೆಯಲ್ಲಿ ಮಾತ್ರ ಇದೆ. ಈ ಎರಡು ಕೇಂದ್ರಗಳಲ್ಲಿ ದಿವ್ಯಾಂಗರಿಗೆ ಬೇಕಾಗುವ ಚಿಕಿತ್ಸೆ ನೀಡುವ ಜೊತೆಗೆ ತರಬೇತಿ ಹಾಗೂ ಸಂಶೋಧನೆ ಮಾಡಲು ಬರುವ ಅಭ್ಯರ್ಥಿಗಳಿಗೆ ಅವಕಾಶ ಕೂಡ ಕಲ್ಪಿಸಲಾಗಿದೆ ಎಂದರು.
ಇನ್ನು ಜಿಲ್ಲೆಯಲ್ಲಿ ಎಷ್ಟು ಜನ ವಿಶೇಷ ಚೇತನರಿದ್ದಾರೆ ಎಂಬ ಸಚಿವ ಪ್ರಶ್ನೆಗೆ ಸಿಆರ್ಸಿ ಕೇಂದ್ರದ ಅಧಿಕಾರಿಗಳು ತಪ್ಪು ಮಾಹಿತಿ ನೀಡಿದ್ದಕ್ಕಾಗಿ ಸಚಿವರು ಗರಂ ಆದರು.