ದಾವಣಗೆರೆ: ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಹಾಗು ನಿವೃತ್ತ ಐಎಎಸ್ ಅಧಿಕಾರಿ ಎಸ್ಎಂ ಜಾಮದಾರ್ ಅವರ ವಿರುದ್ಧ ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅದ್ಯಕ್ಷ ಶಾಮನೂರು ಶಿವಶಂಕರಪ್ಪ ಅವರು ಅವಹೇಳನಕಾರಿ ಹೇಳಿಕೆ ನೀಡಿದ ಬೆನ್ನಲ್ಲೇ ಜಾಗತಿಕ ಲಿಂಗಾಯತ ಮಹಾಸಭಾದಿಂದ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ಕುರಿತು ಒಬ್ಬೊಬ್ಬರು ಒಂದೊಂದು ರೀತಿಯ ಹೇಳಿಕೆ ನೀಡುತ್ತಿರುವುದು ಲಿಂಗಾಯತ ಸಮುದಾಯದಲ್ಲಿ ಬಿರುಗಾಳಿ ಎಬ್ಬಿಸಿದೆ. ಇದರ ಬೆನ್ನಲ್ಲೇ, ಎಸ್ಎಂ ಜಾಮದಾರ್ ಅವರು ಸವಕಲು ನಾಣ್ಯ ಇದ್ದಂತೆ, ಅವರಿಗೆ ಲಿಂಗಾಯತರ ಬಗ್ಗೆ ತಳಬುಡ ಗೊತ್ತಿಲ್ಲ, ಅವರನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕೆಂಬ ಶಾಮನೂರು ಶಿವಶಂಕರಪ್ಪ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿರುವ ಜಾಗತಿಕ ಲಿಂಗಾಯತ ಮಹಾಸಭಾ, ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದೆ.
ಕ್ಷಮೆ ಕೇಳುವುದು ಶಿವಶಂಕರಪ್ಪನವರಿಗೆ ಬಿಟ್ಟ ವಿಚಾರ: ಮಾಲ್ತೇಶ್ ಅಗಡಿ
ಒಬ್ಬ ಉನ್ನತ ಮಟ್ಟದ ವ್ಯಕ್ತಿಯ ಬಗ್ಗೆ ಈ ರೀತಿ ಮಾಡನಾಡಿರುವುದು ಖಂಡನೀಯ. ಶಾಮನೂರು ಶಿವಶಂಕರಪ್ಪನವರು ಮನವರಿಕೆ ಮಾಡಿಕೊಂಡು ಕ್ಷಮೆ ಕೇಳುವುದು ಅವರಿಗೆ ಬಿಟ್ಟ ವಿಚಾರ. ಈ ರೀತಿಯ ಹೇಳಿಕೆಯನ್ನು ಜಾಗತಿಕ ಲಿಂಗಾಯತ ಮಹಾಸಭಾ ಖಂಡಿಸುತ್ತದೆ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ರಾಜ್ಯ ಕಾರ್ಯದರ್ಶಿ ಮಾಲತೇಶ್ ಅಗಡಿ ಹೇಳಿದ್ದಾರೆ.