ದಾವಣಗೆರೆ: ಆಧುನೀಕರಣಕ್ಕೆ ಒಗ್ಗಿಕೊಳ್ಳುತ್ತಿದ್ದಂತೆ ಜಾತಿ ಧರ್ಮಗಳ ಮೇಲಿನ ವ್ಯಾಮೋಹ ಕಡಿಮೆಯಾಗುವುದರ ಬದಲು ಹೆಚ್ಚಾಗುತ್ತಿವೆ. ಆದರೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ನಾಗೇನಹಳ್ಳಿ ಗ್ರಾಮ ಇಡೀ ದೇಶಕ್ಕೆ ಮಾದರಿಯಾಗಿದೆ. ಯಾಕೆಂದರೆ ಇಲ್ಲಿನ ಜನರು ತಮ್ಮ ಧರ್ಮದ ದೇವರ ಜೊತೆಯಲ್ಲಿ ಅನ್ಯ ಧರ್ಮದ ದೇವರನ್ನು ನಂಬಿ ಹಬ್ಬ ಮಾಡುತ್ತಾರೆ.
ಶತ ಶತಮಾನಗಳ ಹಿಂದೆ ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ನಾಗೇನಹಳ್ಳಿ ಗ್ರಾಮಕ್ಕೆ ಕೇರಳದಿಂದ ಆಗಮಿಸಿದ್ದ ಜಮಾಲಸ್ವಾಮಿ ಎಂಬ ಪವಾಡ ಪುರುಷನೊಬ್ಬ ಪವಾಡ ನಡೆಸಿದ್ದನಂತೆ. ಅಂದಿನಿಂದ ಇಂದಿನವರೆಗೂ ಅಲ್ಲಿ ಮುಸ್ಲಿಂ ದೇವರನ್ನು ಇಲ್ಲಿನ ಹಿಂದೂಗಳು ಪೂಜೆ ಮಾಡಿಕೊಂಡು ಬಂದು ಮಂದಿರವನ್ನು ನಿರ್ಮಾಣ ಮಾಡಿ ಕುಲ ದೇವರ ರೀತಿ ನಡೆದುಕೊಳ್ಳುತ್ತಿದ್ದಾರೆ.
ಇನ್ನು ನಾಗೇನಹಳ್ಳಿ ಗ್ರಾಮ ಹಿಂದುಗಳು ಅದರಲ್ಲೂ ಕುರುಬ ಹಾಗೂ ಲಿಂಗಾಯತ ಸಮುದಾಯ ಇರುವಂತಹ ಗ್ರಾಮ. ಸುಮಾರು 300 ಮನೆಗಳು ಇರುವಂತಹ ಈ ಗ್ರಾಮದಲ್ಲಿ, ದರ್ಗಾವನ್ನು ನಿರ್ಮಾಣ ಮಾಡಿಸಿದವರು ಹಿಂದೂಗಳು. ಈ ಗ್ರಾಮದಲ್ಲಿ ಹೇಳಿಕೊಳ್ಳಲು ಒಂದು ಮುಸ್ಲಿಂ ಕುಟುಂಬವೂ ಇಲ್ಲ. ಜಮಾಲ್ ಸ್ವಾಮಿ ಬಂದು ಇಲ್ಲಿ ಪವಾಡ ಮಾಡಿದ್ದರಿಂದ ಹಿಂದೂಗಳು ಇಲ್ಲಿ ಪ್ರತಿನಿತ್ಯ ಪೂಜೆ ಪುನಸ್ಕಾರಗಳನ್ನು ಮಾಡುತ್ತಾರೆ. ಈ ಸನ್ನಿಧಿಯಲ್ಲಿ ಇಷ್ಟಾರ್ಥಗಳು ಸಿದ್ದಿಸುತ್ತವೆ ಎನ್ನುವುದು ಇಲ್ಲಿನ ಭಕ್ತರ ನಂಬಿಕೆಯಾಗಿದೆ..
ಇನ್ನೂ ಇಲ್ಲಿ ಗ್ರಾಮದ ತುಂಬೆಲ್ಲಾ ಪ್ರತಿ ವರ್ಷ ಹಬ್ಬ ಮಾಡಲಾಗುತ್ತದೆ, ಅನಾರೋಗ್ಯವಿದ್ದರೂ ಗುಣಮುಖವಾಗುವುದು ಗ್ಯಾರಂಟಿ ಎನ್ನುತ್ತಾರೆ ಇಲ್ಲಿನ ಜನ. ಹರಕೆ ಈಡೇರಿದ ಬಳಿಕ ಭಕ್ತರು ಇಲ್ಲಿ ಬಂದು ಹಬ್ಬ ಮಾಡುತ್ತಾರೆ. ಇನ್ನೂ ವಿಶೇಷವೆಂದರೆ ಈ ಊರಿನ ಕನ್ಯೆಯನ್ನು ಮದುವೆ ಆದರೆ ಹುಡುಗನ ಕಡೆಯವರು ಮೂರು ಬಾರಿ ಇಲ್ಲಿ ಬಂದು ಜಾತ್ರೆ ಮಾಡಬೇಕು ಎಂಬ ಪದ್ಧತಿ ಮೊದಲಿನಿಂದಲು ನಡೆದುಕೊಂಡು ಬಂದಿದೆ. ಮೊದಲ ಎಡೆಯನ್ನು ಜಮಾಲಸ್ವಾಮಿಗೆ ಅರ್ಪಿಸಿ ನಂತರ ಇಡೀ ಗ್ರಾಮ ಊಟ ಮಾಡುತ್ತದೆ. ಕುಂಬದಲ್ಲಿ ತಂದು ಸರತಿ ಸಾಲಿನಲ್ಲಿ ನಿಂತು ದೇವರಿಗೆ ಎಡೆ ಅರ್ಪಿಸಿ ಪೂಜೆ ಸಲ್ಲಿಸುತ್ತಾರೆ.
ಒಟ್ಟಾರೆಯಾಗಿ ದೇಶದ ಅಲ್ಲಲ್ಲಿ ಧರ್ಮ ಧರ್ಮಗಳ ನಡುವೆ ಆಗಾಗ ಸಂಘರ್ಷಗಳು ನಡೆಯುತ್ತಿರುವಾಗ ಇಲ್ಲಿ ಹಿಂದುಗಳೇ ಮುಸ್ಲಿಂ ಸ್ವಾಮಿಗೆ ದೇವಾಲಯ ಕಟ್ಟಿ ಆ ದೇವರಿಗೆ ಪೂಜೆ ಮಾಡುತ್ತಿರುವುದು ನಿಜಕ್ಕೂ ದೇಶಕ್ಕೆ ಮಾದರಿ.