ದಾವಣಗೆರೆ: ಮಾಸ್ಕ್ ಧರಿಸದವರಿಗೆ ಹಾಗೂ ಸಿಗರೇಟ್ ಸೇದುತ್ತಿದ್ದವರಿಗೆ ದುರ್ಗಾ ಪಡೆ ಕಾರ್ಯಾಚರಣೆ ನಡೆಸಿ ಸ್ಥಳದಲ್ಲಿಯೇ ದಂಡ ವಿಧಿಸಿದೆ.
ನಗರದ ದೀಕ್ಷಿತ್ ರಸ್ತೆ ಸೇರಿದಂತೆ ವಿವಿಧೆಡೆ ಕಾರ್ಯಾಚರಣೆ ನಡೆಸಿದ ಮಹಿಳಾ ಪೊಲೀಸ್ ಸಿಬ್ಬಂದಿ, ಕೊರೊನಾ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಆದೇಶ ಹೊರಡಿಸಿದ್ದರೂ ಉಲ್ಲಂಘಿಸಿದವರಿಗೆ ಬಿಸಿ ಮುಟ್ಟಿಸಿದ್ದಾರೆ.
ಸಿಗರೇಟ್ ಸೇದುತ್ತಿದ್ದವರಿಗೂ ದಂಡ ವಿಧಿಸಿದ ಮಹಿಳಾ ಪೊಲೀಸರು, ತಂಬಾಕು ಸೇವನೆ ಮಾಡುತ್ತಿದ್ದವರಿಗೆ ಎಚ್ಚರಿಕೆ ನೀಡಿ ಸ್ಥಳದಲ್ಲಿಯೇ ದಂಡ ವಿಧಿಸಿತು. ಇನ್ನು ವ್ಯಾಪಾರಿಗಳಿಗೆ ಇದು ಮರುಕಳಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಅಂಗಡಿಗೆ ಬರುವ ಪ್ರತಿಯೊಬ್ಬರಿಗೂ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸೂಚಿಸಬೇಕು. ಗುಟ್ಕಾ, ಸಿಗರೇಟ್ ಸೇರಿದಂತೆ ತಂಬಾಕು ಮಾರಾಟ ಮಾಡಬೇಡಿ. ಜಗಿದು ಅಲ್ಲೇ ಉಗಿಯುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದಿದೆ. ಇದರ ಬಗ್ಗೆ ನಿಗಾ ವಹಿಸಿ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.