ದಾವಣಗೆರೆ: ಅಕ್ರಮವಾಗಿ ಮತದಾರರ ಪಟ್ಟಿಯಲ್ಲಿರುವ ಆರೋಪ ಹೊಂದಿರುವ 12 ಮಂದಿ ಎಂಎಲ್ಸಿಗಳಿಗೆ ನಾಳೆ ನಡೆಯುವ ಪಾಲಿಕೆ ಚುನಾವಣೆಯಲ್ಲಿ ಮತದಾನಕ್ಕೆ ಅವಕಾಶ ನೀಡಬಾರದೆಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಿ.ಬಸವರಾಜ್ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ವಾಮಮಾರ್ಗದ ಮೂಲಕ ಪಾಲಿಕೆಯಲ್ಲಿ ಮೇಯರ್ ಪಟ್ಟ ಹಿಡಿಯಲು ಹೊರಟಿದೆ. ಅಕ್ರಮವಾಗಿ ಮತಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗಲು ಜಿಲ್ಲಾಡಳಿತದ ಲೋಪದೋಷ ಕಾರಣ. ಇದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಮೊದಲು ಇದ್ದ 50 ಮಂದಿಗೆ ಮಾತ್ರ ಮತದಾನಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಪಾಲಿಕೆಯ 45 ಸದಸ್ಯರು, ಶಾಸಕರು, ಸಂಸದರು, ಪಾಲಿಕೆ ವ್ಯಾಪ್ತಿಯಲ್ಲಿರುವ ಎಂಎಲ್ಸಿಗಳಿಗೆ ಮಾತ್ರ ವೋಟಿಂಗ್ ಮಾಡಲು ಅವಕಾಶ ಇದೆ. ಆದ್ರೆ, ಬಿಜೆಪಿಯ 8 ಎಂಎಲ್ಸಿಗಳ ನಕಲಿ ದಾಖಲೆ ಸೃಷ್ಟಿಸಿ ಮತದಾನಕ್ಕೆ ಅವಕಾಶ ನೀಡಲಾಗಿದೆ. ಈಗ 62 ಮಂದಿಗೆ ಪರಿಷ್ಕೃತ ಪಟ್ಟಿಯಲ್ಲಿ ವೋಟಿಂಗ್ಗೆ ಅವಕಾಶ ನೀಡಿರುವುದು ಕಾನೂನು ಬಾಹಿರ. ಬಿಜೆಪಿ ಎಷ್ಟೇ ಕುತಂತ್ರ ನಡೆಸಿದರೂ ಪಾಲಿಕೆಯ ಮೇಯರ್ ಪಟ್ಟ ನಮಗೆ ಎಂಬ ವಿಶ್ವಾಸ ಇದೆ ಎಂದು ಹೇಳಿದರು.