ದಾವಣಗೆರೆ: ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕಾರ್ಯರೂಪಕ್ಕೆ ತರಲು ನೀತಿ ರೂಪಿಸಿದ್ದು, ಕಾರ್ಯರೂಪಕ್ಕೆ ತರುವ ದೊಡ್ಡ ಜವಾಬ್ದಾರಿ ನಮ್ಮ ರಾಜ್ಯದ ಮೇಲಿದೆ. ಎಲ್ಲ ರಾಜ್ಯದವರು ನಮ್ಮ ರಾಜ್ಯದ ಕಡೆ ನೋಡುತ್ತಿದ್ದಾರೆ. ಈ ಮೂಲಕ ಮಾದರಿಯಾಗಿ ಶಿಕ್ಷಣ ನೀತಿಯನ್ನು ಅನುಷ್ಠಾನಕ್ಕೆ ತರಬೇಕಿದೆ ಎಂದು ಉಪಮುಖ್ಯಮಂತ್ರಿಯೂ ಆಗಿರುವ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ್ ಹೇಳಿದರು.
ನ್ಯಾಮತಿಯಲ್ಲಿ ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕುಗಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಹಾಗೂ ವಿವಿಧ ಸರ್ಕಾರಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಮಾಜದಲ್ಲಿ ಎಲ್ಲ ಕ್ಷೇತ್ರದಲ್ಲಿನ ವೃತ್ತಿಗೆ ಗುಣಮಟ್ಟದ ಶಿಕ್ಷಣ ಅವಶ್ಯಕ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕಿದ್ದು, ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಇದೊಂದು ದೊಡ್ಡ ಪರ್ಯಾಯವಾಗಲಿದೆ ಎಂದರು.
5 ಸಾವಿರ ಕೋಟಿ: ಐಟಿಐ ಕೋರ್ಸ್‍ಗೆ 150 ಕಾಲೇಜು ಆಯ್ಕೆ ಮಾಡಿದ್ದು, ಒಂದೊಂದು ಕಾಲೇಜಿಗೆ 30 ರಿಂದ 33 ಕೋಟಿ ಖರ್ಚು ಮಾಡಲಾಗುತ್ತಿದೆ. ಒಟ್ಟು 5 ಸಾವಿರ ಕೋಟಿ ಕೇವಲ ಐಟಿಐ ಕಾಲೇಜು ಅಭಿವೃದ್ಧಿಗೆ ಬಿಡುಗಡೆ ಮಾಡಲಾಗುತ್ತಿದೆ. ಜೊತೆಗೆ ಡಿಪ್ಲೋಮಾ ಕಾಲೇಜಿಗೆ ಬಹಳಷ್ಟು ವಿದ್ಯಾರ್ಥಿಗಳು ಸೇರಬಯಸುತ್ತಾರೆ. ಪಾಲಿಟೆಕ್ನಿಕ್‍ಗೆ ಸೇರ ಬಯಸುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ. ಇವತ್ತು ಏನಾದರೂ ಉತ್ತಮವಾದ ಉದ್ಯೋಗ ಅವಕಾಶವಿದೆ ಎಂದರೆ ಅದು ಪಾಲಿಟೆಕ್ನಿಕ್ ಕಾಲೇಜಿನಿಂದ ಮಾತ್ರ. ಈ ಹಿನ್ನೆಲೆಯಲ್ಲಿ ಪಾಲಿಟೆಕ್ನಿಕ್ ಕಾಲೇಜಿಗಾಗಿ ಬಹಳಷ್ಟು ಸುಧಾರಣೆ ತರಲಾಗುತ್ತಿದೆ. ಸಿಲಬಸ್ ಸರಳ ಮಾಡಲಾಗುತ್ತಿದೆ ಎಂದರು.
ಅಭಿವೃದ್ಧಿಗೆ ಬದ್ಧ: ರೇಣುಕಾಚಾರ್ಯ
ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ.ರೇಣುಕಾಚಾರ್ಯ ಮಾತನಾಡಿ, ಸಾಂಕೇತಿಕವಾಗಿ ಕಾರ್ಯಕ್ರಮ ಉದ್ಘಾಟನೆ ಮಾಡಲಾಗಿದೆ. 69 ಕೋಟಿ ರೂ ವೆಚ್ಚದಲ್ಲಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಅವಳಿ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಸಂಸದರು ನಾವು ಬದ್ಧರಾಗಿದ್ದೇವೆ. ವಸತಿಶಾಲೆ, ರಸ್ತೆಗಳು, ಹಾಸ್ಟೆಲ್‍ಗಳು, ಎಪಿಎಂಸಿ, ಪ್ರಥಮ ದರ್ಜೆ ಕಾಲೇಜು ಸೇರಿದಂತೆ ಅನೇಕ ಕಾರ್ಯಕ್ರಮ ಉದ್ಘಾಟನಾ ಮಾಡಲಾಗಿದೆ. ಈ ಕಾರ್ಯಕ್ರಮಕ್ಕೆ ಸಹಕಾರ ಸಚಿವರಾದ ಸೋಮಣ್ಣ ಅವರು ಬರಬೇಕಿತ್ತು. ಮೈಸೂರು ದಸರಾ ಹಿನ್ನೆಲೆಯಲ್ಲಿ ಬರಲಾಗಿಲ್ಲ ಎಂದು ಸ್ಪಷ್ಟಪಡಿಸಿದರು.