ದಾವಣಗೆರೆ: ದಾವಣಗೆರೆ ಉತ್ತರ ಹಾಗೂ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಅಭಿವೃದ್ದಿ ವಿಚಾರ ಆಧರಿಸಿ ನಗರದ ಪ್ರಜ್ಞಾವಂತ ಮತದಾರರು ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಬೆಂಬಲಿಸಲಿದ್ದಾರೆ ಎಂದು ಹೂವಿನಹಡಗಲಿ ಶಾಸಕ ಹಾಗೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಆಯ್ಕೆ ಸಮಿತಿ ಸದಸ್ಯ ಪಿ ಟಿ ಪರಮೇಶ್ವರ್ ನಾಯ್ಕ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಈ ಬಗ್ಗೆ ಮಾತನಾಡಿದ ಅವರು, ದಾವಣಗೆರೆ ಮಹಾನಗರ ಪಾಲಿಕೆ, ಉತ್ತರ ಹಾಗೂ ದಕ್ಷಿಣ ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಸ್ ಎಸ್ ಮಲ್ಲಿಕಾರ್ಜುನ್ ಅವರ ಸಾಧನೆ ಗಮನಿಸಿ ಎದುರಾಳಿ ಅಭ್ಯರ್ಥಿಯ ಠೇವಣಿ ಕಳೆಯಬೇಕಿತ್ತು. ಆದರೆ, ಕೆಟ್ಟ ಘಳಿಗೆ ಏನೋ, ಜನರು ಸೋಲಿಸಿದ್ದಾರೆ. ಆದರೆ, ಅವರ ಸಾಧನೆ ಪರಿಗಣಿಸಿ ಈ ಬಾರಿ 45 ರಲ್ಲಿ 40 ವಾರ್ಡ್ಗಳಲ್ಲಿ ಗೆದ್ದು ಕಾಂಗ್ರೆಸ್ ಅಧಿಕಾರ ಹಿಡಿಯಲಿದೆ ಎಂದರು.
ಸಾಮಾಜಿಕ ನ್ಯಾಯದಡಿ ಕಾಂಗ್ರೆಸ್ ಟಿಕೆಟ್ ಹಂಚಿಕೆಯಾಗಲಿದೆ. ಯುವಕರನ್ನು, ಹಿರಿಯರನ್ನು, ಮಹಿಳೆಯರನ್ನು ಸೇರಿದಂತೆ ಎಲ್ಲಾ ಜಾತಿ-ಜನಾಂಗದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಶಾಮನೂರು ಶಿವಶಂಕರಪ್ಪನವರ ಆಶೀರ್ವಾದದೊಂದಿಗೆ ಪಾಲಿಕೆ ಚುನಾವಣೆ ಎದುರಿಸಲಿದ್ದೇವೆ ಎಂದು ತಿಳಿಸಿದರು.