ಬೆಂಗಳೂರು : ಟಿಡಿಆರ್ ಸಂಬಂಧ ವಿಧೇಯಕ ಮಂಡಿಸಲಾಗುತ್ತಿದೆ. ಇದರಿಂದ ಟಿಡಿಆರ್‌ಗೆ ಹೆಚ್ಚಿನ ಬೆಲೆ ಬರಲಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.
ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಸತೀಶ್ ರೆಡ್ಡಿ, ಬನ್ನೇರುಘಟ್ಟ ರಸ್ತೆ ಬೇಗೂರು ರಸ್ತೆ-ಸರ್ಜಾಪುರ ರಸ್ತೆ ಅಗಲೀಕರಣ ಕಾಮಗಾರಿ ಬಗ್ಗೆ ವಿಷಯ ಪ್ರಸ್ತಾಪಿಸುತ್ತಾ, ಮೆಟ್ರೋದಿಂದ ಅರೆಬರೆ ಕಾಮಗಾರಿ ಮಾಡಿದ್ದಾರೆ.
ಅವರೇ ಕಾಮಗಾರಿ ಪೂರ್ಣಗೊಳಿಸಬೇಕು. 'ಅಭಿವೃದ್ಧಿ ಹಕ್ಕು ವರ್ಗಾವಣೆ'(ಟಿಡಿಆರ್) ಮೌಲ್ಯ ಬರುವಂತೆ ಮಾಡಬೇಕು. ಟಿಡಿಆರ್‌ಗೆ ಬೆಲೆ ಇಲ್ಲವಾದರೆ, ಯಾರೂ ಮುಂದೆ ಬರುವುದಿಲ್ಲ ಎಂದು ತಿಳಿಸಿದರು.
ಇದಕ್ಕೆ ಉತ್ತರಿಸಿದ ಸಿಎಂ, ಕಾಮಗಾರಿಗಾಗಿ ಭೂಸ್ವಾಧೀನ ಮಾಡಿದರೆ, 4,475 ಕೋಟಿ ರೂ. ಪಾಲಿಕೆ ಮೇಲೆ ಹೊರೆ ಬೀಳುತ್ತದೆ. ಅದಕ್ಕಾಗಿ ಟಿಡಿಆರ್ ಮೊರೆ ಹೋಗಿದ್ದಾರೆ. ಆದರೆ, ಟಿಡಿಆರ್‌ಗೆ ಯಾರೂ ಮುಂದೆ ಬರುತ್ತಿಲ್ಲ. ಟಿಡಿಆರ್ ಕೊಡುವ ಪದ್ಧತಿಯಲ್ಲಿ ಭಾರೀ ಗೊಂದಲ ಇದೆ.
ಯೋಜನಾ ಪ್ರಾಧಿಕಾರ ಹಾಗೂ ಕಾಮಗಾರಿ ಅನುಷ್ಠಾನ ಏಜೆನ್ಸಿಗಳು ಇಬ್ಬರೂ ಟಿಡಿಆರ್ ಅನುಮೋದನೆ ನೀಡಬೇಕಾಗಿತ್ತು. ಇದರಿಂದ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿತ್ತು. ಈ ನಿಟ್ಟಿನಲ್ಲಿ ಈಗಾಗಲೇ ಟಿಡಿಆರ್ ಸರಳೀಕರಣ ಮಾಡಲು ವಿಧೇಯಕ ಮಾಡಿದ್ದೇವೆ. ಈ ವಿಧೇಯಕ ಬಂದರೆ ಟಿಡಿಆರ್ ಬೆಲೆ ಹೆಚ್ಚಾಗುತ್ತದೆ ಎಂದು ಹೇಳಿದರು.