ದಾವಣಗೆರೆ: ಗೊತ್ತಿದ್ದೋ, ಗೊತ್ತಿಲ್ಲದೆಯೋ ಯಾರದೋ ಪ್ರಾಣ ಉಳಿಸಲು ಕಾರಣೀಕೃತರಾಗಿರುವ ರಕ್ತದಾನಿಗಳು ಜೀವ ಉಳಿಸುವ ರಕ್ಷಕರು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅಭಿಪ್ರಾಯಪಟ್ಟರು.
ನಗರದ ಕುವೆಂಪು ಕನ್ನಡ ಭವನದ ರಾಷ್ಟ್ರಕವಿ ಡಾ. ಜಿ. ಎಸ್. ಶಿವರುದ್ರಪ್ಪ ಸಭಾಂಗಣದಲ್ಲಿ ಸುರಕ್ಷಿತ ರಕ್ತ, ಜೀವ ರಕ್ಷಕ ರಕ್ತ ನೀಡಿ ಮತ್ತು ಪ್ರಪಂಚವನ್ನು ಆರೋಗ್ಯಕರ ಸ್ಥಳವನ್ನಾಗಿಸಿ ಎಂಬ ಘೋಷವಾಕ್ಯದಡಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಸ್ವಯಂಪ್ರೇರಿತ ರಕ್ತದಾನಿಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಎಲ್ಲಾ ಊರಲ್ಲಿಯೂ ಸಹ ಕೊರೊನಾ ಪ್ರಕರಣಗಳು ಕಂಡು ಬರುತ್ತಿವೆ. ಈ ಸಂದರ್ಭದಲ್ಲಿ ನಾವು ಸಾಮಾಜಿಕ ಅಂತರ ಕಾಯ್ದುಕೊಂಡು ನಮ್ಮನ್ನು ನಾವು ಸಂಪೂರ್ಣವಾಗಿ ರಕ್ಷಣೆ ಮಾಡಿಕೊಳ್ಳಬೇಕಿದೆ. ನಿಮ್ಮ ಸಂಪರ್ಕದಲ್ಲಿರುವ ಯಾರಿಗಾದರೂ ಶೀತ, ಜ್ವರ, ಕೆಮ್ಮು ಉಸಿರಾಟದ ತೊಂದರೆ ಕಂಡುಬಂದಲ್ಲಿ ಆಸ್ಪತ್ರೆಗೆ ಹೋಗಿ ತೋರಿಸಿಕೊಳ್ಳಿ ಎಂದು ಸಲಹೆ ನೀಡಬೇಕು. ಅವರಿಗೆ ಮಾಸ್ಕ್ ಹಾಕಿಕೊಳ್ಳುವಂತೆ ತಿಳಿ ಹೇಳಿಬೇಕು. ಪ್ರತಿಯೊಬ್ಬರು ಮಾಸ್ಕ್ ಹಾಕಿಕೊಳ್ಳುವ ಮೂಲಕ ನಿಮ್ಮನ್ನು ಮಾತ್ರವಲ್ಲದೆ ನಿಮ್ಮ ಸುತ್ತಮುತ್ತಲಿನವರರನ್ನು ರಕ್ಷಿಸಬೇಕಾಗಿದೆ. ಜೊತೆಗೆ ನಮ್ಮಿಂದಾಗಿ ಹಲವು ಜನರಿಗೆ ಆಗುವ ತೊಂದರೆಯನ್ನು ತಪ್ಪಿಸಬಹುದಾಗಿದೆ ಎಂದು ಹೇಳಿದರು.
ರಕ್ತಭಂಡಾರದ ವೈದ್ಯಾಧಿಕಾರಿ ಡಾ. ಡಿ. ಹೆಚ್. ಗೀತಾ ಮಾತನಾಡಿ, ರಕ್ತಕ್ಕೆ ವರ್ಷವಿಡಿ ನಿರಂತರವಾಗಿ ಬೇಡಿಕೆ ಇರುತ್ತೆ. ಯಾಕೆಂದರೆ ಅಪಘಾತಗಳು, ತುರ್ತು ಶಸ್ತ್ರ ಚಿಕಿತ್ಸೆ ಸಂದರ್ಭದಲ್ಲಿ ಕ್ಯಾನ್ಸರ್ ರೋಗಿಗಳು, ಗರ್ಭಿಣಿಯರು, ಹಿಮೊಫಿಲಿಯಾ, ಸಿಕಲ್‍ಸೆಲ್, ಅನಿಮೀಯಾ ಮುಂತಾದ ರೋಗಿಗಳು ರಕ್ತದಾನಿಗಳನ್ನೇ ಅವಲಂಬಿಸಿರುತ್ತಾರೆ ಎಂದರು.