ದಾವಣಗೆರೆ: ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಜಾರಿಗೆ ತಂದಿರುವ ಜನಸಂಖ್ಯಾ ನೀತಿಯನ್ನು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಸ್ವಾಗತಿಸಿದ್ದಾರೆ.
ದಾವಣಗೆರೆಯಲ್ಲಿ ಮಾತನಾಡಿದ ಅವರು, ನಮ್ಮ ದೇಶದ ಜನಸಂಖ್ಯೆ ಮಿತಿಮೀರಿ ಬೆಳೆಯುತ್ತಿದ್ದು, ಜನಸಂಖ್ಯೆ ನಿಯಂತ್ರಣ ಮಾಡಿದ್ರೆ ಅನುಕೂಲವಾಗುತ್ತದೆ. ಜನಸಂಖ್ಯೆ ನಿಯಂತ್ರಣ ಮಾಡುವುದರಿಂದ ಎಲ್ಲ ಮಕ್ಕಳಿಗೆ, ಜನರಿಗೆ ಮೂಲ ಸೌಕರ್ಯ ಸಿಗುತ್ತದೆ. ಜನಸಂಖ್ಯೆ ಹೆಚ್ಚುತ್ತಿರುವುದರಿಂದ ಸೌಲಭ್ಯಗಳ ಕೊರತೆ ಉಂಟಾಗುತ್ತಿದೆ. ಹಾಗಾಗಿ ಜನಸಂಖ್ಯಾ ನೀತಿ ಜಾರಿಗೆ ತರುವುದು ಒಳ್ಳೆಯದು ಎಂದರು.
ವಿಶ್ವದ ದೊಡ್ಡಣ್ಣ ಅಮೇರಿಕ 34 ರಿಂದ 35 ಕೋಟಿ ಜನಸಂಖ್ಯೆ ಹೊಂದಿದೆ. ಅದ್ದರಿಂದ ಅಭಿವೃದ್ಧಿಯಾಗಿದ್ದು, ಜನಸಂಖ್ಯೆ ಕಡಿಮೆ ಇರುವುದರಿಂದ ಅಮೆರಿಕದಲ್ಲಿ ಸೌಲಭ್ಯಗಳು ಸರಿಯಾಗಿ ಸಿಗುತ್ತಿವೆ. ನಮ್ಮ ದೇಶದಲ್ಲಿ ಸಹ ಈಗಿನಿಂದಲೇ ಜನಸಂಖ್ಯೆ ನಿಯಂತ್ರಣ ಮಾಡಿದರೆ ಮುಂದಿನ ಪೀಳಿಗೆಗೆ ಸಹಕಾರಿಯಾಗುತ್ತದೆ. ಜನಸಂಖ್ಯೆಗೆ ಕಡಿವಾಣ ಹಾಕಲು ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅವರು ಕಾರ್ಯಕ್ರಮ ರೂಪಿಸಿಕೊಂಡಿದ್ದು, ಕರ್ನಾಟಕದಲ್ಲಿ ಕೂಡ ಅದರ ಸಾಧಕ - ಬಾಧಕಗಳನ್ನು ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.