ಆನೇಕಲ್: ಯುವಕನನ್ನು ಬೇರೆಡೆ ಕೊಲೆಗೈದು ಮನೆ ಗೇಟಿನ ಮುಂಭಾಗ ಎಸೆದು ಹೋಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ದಾಸನಪುರದಲ್ಲಿ ನಡೆದಿದೆ.
ದಾಸನಪುರ ವೆಂಕಟೇಶಪ್ಪನ ಮಗ ಸತೀಶ್ (23) ಕೊಲೆಯಾದ ವ್ಯಕ್ತಿ. ಈತ ಹೂ ಸಾಗಣೆ ಮಾಡುವ ವಾಹನ ಚಾಲಕನಾಗಿ ಕೆಲಸ ಮಾಡುತ್ತಿದ್ದ.
ಮನೆ ಮುಂದಿನ ಗೇಟಿನ ರಸ್ತೆಯಲ್ಲಿ ಬೆಳಗ್ಗೆ ಬಾಯಿಯಲ್ಲಿ ರಕ್ತ, ತಲೆಯ ಹಿಂಬದಿ ಗಾಯವಾಗಿರುವ ಸ್ಥಿತಿಯಲ್ಲಿ ಶವ ಕಂಡಿತ್ತು. ಎದುರು ಮನೆಯಾಕೆ ಎಂದಿನಂತೆ ಗೇಟು ತೆರೆದಾಗ ಯಾರೋ ಕುಡಿದು ಬಿದ್ದಿರಬಹುದೆಂದು ಮನೆಯ ಯಜಮಾನನನ್ನು ಎಬ್ಬಿಸಿ ಪರಿಶೀಲಿಸಿದಾಗ ಸತೀಶ್ ಸತ್ತುಬಿದ್ದಿರಬಹುದೆಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಅತ್ತಿಬೆಲೆ ಪೊಲೀಸ್ ಇನ್ಸ್‌ಪೆಕ್ಟರ್ ಬೆಂಗಳೂರು ಗ್ರಾಮಾಂತರ ಎಸ್‍ಪಿ ವಂಶಿಕೃಷ್ಣ ಭೇಟಿ ನೀಡಿದ ನಂತರ ಸಂಜೆ ಕೊಲೆಯಾಗಿದೆ ಎಂದು ದೃಢೀಕರಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.