ಬೆಳಗಾವಿ: ಕಾಂಗ್ರೆಸ್-ಜೆಡಿಎಸ್ನಲ್ಲಿನ ಅತೃಪ್ತರನ್ನು ಒಗ್ಗೂಡಿಸಲು ಸಿ.ಪಿ.ಯೋಗೇಶ್ವರ ಮನೆ ಮೇಲೆ 9 ಕೋಟಿ ರೂ ಸಾಲ ಮಾಡಿದ್ದರು. ಎಂಟಿಬಿ ಬಳಿಯೂ ಸಾಲ ಪಡೆದರು. ನಮ್ಮನ್ನು ಒಗ್ಗೂಡಿಸಲು ತಮ್ಮ ಆರೋಗ್ಯ ಹಾಳು ಮಾಡಿಕೊಂಡಿದ್ದರು. ಇದೀಗ ಅವರು ಸಂಪುಟ ಸೇರಿದ್ದು ಖುಷಿಯಾಗಿದೆ ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋತವರಿಗೆ ಮಂತ್ರಿ ಸ್ಥಾನ ಕೊಟ್ಟಿರುವ ಬಗ್ಗೆ ಆಪಾದನೆಗಳು ಬರುತ್ತಿವೆ. ಅಂದು ನಮ್ಮನ್ನು ಒಗ್ಗೂಡಿಸುವುದು ಯೋಗೇಶ್ವರ್ಗೆ ಯಾಕೆ ಬೇಕಿತ್ತು?. ಅವರು ಕಷ್ಟಪಟ್ಟು ಹೆಲ್ತ್ ಹಾಳು ಮಾಡಿಕೊಂಡರು. ಸಾಲ ಮಾಡಿಕೊಂಡು ಸರ್ಕಾರ ರಚಿಸುವುದು ಅವರಿಗೆ ಏಕೆ ಬೇಕಿತ್ತು?. ಈಗ ಮಾತನಾಡುವವರು ಆಗ ಎಲ್ಲಿದ್ದರು? ಎಂದು ಅಸಮಾಧಾನಿತರ ವಿರುದ್ಧ ಸಚಿವ ಜಾರಕಿಹೊಳಿ ಗರಂ ಆದರು.
ಇದನ್ನೂ ಓದಿ: ಸಿಎಂ ಬಿಎಸ್ವೈ ನಿವಾಸದಲ್ಲಿ ಸಂಕ್ರಾಂತಿ ಸಂಭ್ರಮ
'ವಿಶ್ವನಾಥ್ ಅವರ ಮಾತು ಆಶೀರ್ವಾದ'
ಭ್ರಷ್ಟರಿಗೆ ರಮೇಶ್ ಸಾಥ್ ಕೊಡ್ತಿದ್ದಾರೆ ಎಂಬ ವಿಶ್ವನಾಥ್ ಹೇಳಿಕೆಗೆ ಪ್ರತಿಕ್ರಿಯೆ ನೀಡುತ್ತಾ, ವಿಶ್ವನಾಥ್ ಮಾತು ಆಶೀರ್ವಾದ ಇದ್ದಂತೆ. ಅವರ ಹೇಳಿಕೆಗೆ ನಾನು ಕಮೆಂಟ್ ಮಾಡಲ್ಲ. ಸಂಪುಟ ವಿಸ್ತರಣೆಯಲ್ಲಿ ಸಿಎಂ ತೆಗೆದುಕೊಂಡ ನಿರ್ಣಯಕ್ಕೆ ನಮ್ಮ ಸಹಮತವಿದೆ. ದೊಡ್ಡ ಪಕ್ಷದಲ್ಲಿ ಅಸಮಾಧಾನ ಸಹಜ. ಅದನ್ನು ಪಕ್ಷದವರು ಸರಿಪಡಿಸುತ್ತಾರೆ ಎಂದು ಹೇಳಿದರು.
'ಯಡಿಯೂರಪ್ಪ ಬ್ಲಾಕ್ ಮೇಲ್ಗೆ ಹೆದರುವ ವ್ಯಕ್ತಿ ಅಲ್ಲ'
ಯತ್ನಾಳ್ ಮತ್ತು ವಿಶ್ವನಾಥ್ ಸಿಡಿ ಬಾಂಬ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಿಡಿ ಇದೆಯೋ? ಇಲ್ಲವೋ? ಗೊತ್ತಿಲ್ಲ. ಈ ರೀತಿ ಸಿಡಿಗಳು ಬರ್ತವೆ ಹೋಗುತ್ತವೆ. ರಾಜಕಾರಣದಲ್ಲಿ, ವೈಯಕ್ತಿಕ ಜೀವನದಲ್ಲಿ ಈ ರೀತಿ ಮಾತಾಡಬಾರದು. ವೈಯಕ್ತಿಕ ಜೀವನದಲ್ಲಿ ಕಹಿ ಘಟನೆಗಳು ಇರ್ತವೆ. ಅದರ ಬಗ್ಗೆ ಬಹಿರಂಗವಾಗಿ ಮಾತಾಡಬಾರದು.
ಕಷ್ಟದಲ್ಲಿರುವ ರಾಜಕಾರಣಿಗಳಿಗೆ ನೈತಿಕ ಸಪೋರ್ಟ್ ಮಾಡಬೇಕು. ಅವರನ್ನು ಡ್ಯಾಮೇಜ್ ಮಾಡಬಾರದು, ಬರೀ ರಾಜಕಾರಣ ಮಾಡಬೇಕು. ನಮ್ಮ ಯಡಿಯೂರಪ್ಪ ಬ್ಲ್ಯಾಕ್ ಮೇಲ್ ಗೆ ಹೆದರುವ ವ್ಯಕ್ತಿ ಅಲ್ಲ. ತಮ್ಮ ಜೀವನದುದ್ದಕ್ಕೂ ಹೋರಾಟ ಮಾಡಿಕೊಂಡು ಬಂದ ಮನುಷ್ಯ. ಯಾವ ಸಿಡಿ, ಏನೂ ಇಲ್ಲ ಎಂದು ಸಚಿವ ಜಾರಕಿಹೊಳಿ ಹೇಳಿದರು.
'ನಾವು ಯಡಿಯೂರಪ್ಪ ಪರ'
ರಾಜ್ಯದಲ್ಲಿ ಒಂದು ವೇಳೆ ನಾಯಕತ್ವ ಬದಲಾವಣೆ ಆದರೆ ನಾವು ಯಡಿಯೂರಪ್ಪ ಪರವಾಗಿ ಇರುತ್ತೇವೆ. ಮಿತ್ರಮಂಡಳಿ ಸದಸ್ಯರ ಪರ ಹಾದಿ ಬೀದಿಯಲ್ಲಿ ಮಾತನಾಡಲು ಆಗಲ್ಲ. ಎಲ್ಲಿ ಮಾತಾಡಬೇಕು ಅಲ್ಲಿ ಮಾತನಾಡುತ್ತೇವೆ. ಈಗಾಗಲೇ ಯೋಗೇಶ್ವರ್ ಮಂತ್ರಿ ಆಗಿದ್ದಾರೆ. ಮುನಿರತ್ನ ಸಚಿವರಾಗ್ತಾರೆ, ಮುಂದಿನ ದಿನಗಳಲ್ಲಿ ಹೈಕಮಾಂಡ್ ಜೊತೆ ಮಾತನಾಡಿ ಅವರ ಪರ ಪ್ರಯತ್ನ ಮಾಡುತ್ತೇವೆ. ನಾನು ಬಾಂಬೆ ಟೀಮಿನ ಕ್ಯಾಪ್ಟನ್ ಅಲ್ಲ, ಕೊನೆಯ ಹದಿನೇಳನೆಯವನು. ಮುನಿರತ್ನ ಮತ್ತು ನಾಗೇಶ್ ಡ್ರಾಪ್ ಆಗ್ತಾರೆ ಅಂತಾ ನನಗೆ ಕಲ್ಪನೆ ಇರಲಿಲ್ಲ ಎಂದರು.