ಬೆಂಗಳೂರು : ಸ್ವಾತಂತ್ರ್ಯಹೋರಾಟಗಾರ ಹೆಚ್ ಎಸ್ ದೊರೆಸ್ವಾಮಿ ವಿರುದ್ಧ ಲಘುವಾಗಿ ಮಾತನಾಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಅವರಿಗೆ ಚಿಕಿತ್ಸೆಯ ಅಗತ್ಯವಿದೆ ಎಂದು ಮಾಜಿ ಸಂಸದ ವಿ ಎಸ್ ಉಗ್ರಪ್ಪ ವಾಗ್ದಾಳಿ ನಡೆಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಥೋಡ್ ಜತೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇದು ಯತ್ನಾಳ್ ಅವರ ವೈಯುಕ್ತಿಕ ಅಭಿಪ್ರಾಯವಲ್ಲ. ಬಿಜೆಪಿ ನಾಯಕರ ಮನಸ್ಥಿತಿ. ಯತ್ನಾಳ್ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಮಂತ್ರಿಗಿರಿ ಸಿಗದ ಹಿನ್ನೆಲೆ ಈ ರೀತಿ ಮಾತನಾಡಿದ್ದಾರೆ. ಹೀಗಾಗಿ ಅವರಿಗೆ ಮೆಡಿಕಲ್ ಟ್ರೀಟ್ಮೆಂಟ್ ಅಗತ್ಯವಿದೆ. ಕೂಡಲೇ ಇವರ ವಿರುದ್ಧ ಕೇಸು ದಾಖಲಿಸಿ ಯತ್ನಾಳ್‌ರನ್ನು ಜೈಲಿಗಟ್ಟಿ ಶಿಕ್ಷೆಗೆ ಒಳಪಡಿಸಬೇಕು. ಜತೆಗೆ ಯತ್ನಾಳ್ ಸದಸ್ಯತ್ವವನ್ನು ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.
ಇಂದು ಸಂಜೆ ಯತ್ನಾಳ್ ಹೇಳಿಕೆ ಖಂಡಿಸಿ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರತಿಭಟನೆಗೆ ಕರೆ ನೀಡಲಾಗಿದೆ. ವಿಧಾನಸೌಧದ ಗಾಂಧಿ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಸಲಿದ್ದೇವೆ. ರಾಜ್ಯ ಕಾಂಗ್ರೆಸ್‌ನ ವಿವಿಧ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದರು. ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಬಿಜೆಪಿ ಶಾಸಕ ಯತ್ನಾಳ್ ಲಘುವಾಗಿ ಮಾತನಾಡ್ತಿದ್ದಾರೆ. ಆರ್ಎಸ್ಎಸ್ ಬಿಜೆಪಿ ನಾಯಕರು ಕೂಡ ಮಾತನಾಡುತ್ತಿದ್ದಾರೆ. ಮಹಾತ್ಮ ಗಾಂಧಿ, ಅಂಬೇಡ್ಕರ್ ವಿರುದ್ಧವೂ ಹಲವರು ಅವಹೇಳನ ಮಾಡಿದ್ದಾರೆ.
ಶತಾಯುಷಿ ದೊರೆಸ್ವಾಮಿ ಅವರು ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದವರು. ಇದು ಯತ್ನಾಳ್ ಒಬ್ಬರ ಮಾತಲ್ಲ, ಬಿಜೆಪಿಯಲ್ಲಿರುವ ಎಲ್ಲರ ಮಾತು ಇದೇ ಆಗಿರುತ್ತೆ. ಯತ್ನಾಳ್ ಅವರ ಮೇಲೆ ಹಲವಾರು ಕ್ರಿಮಿನಲ್ ಕೇಸ್‌ಗಳು ಇವೆ. ಅವರು ದೊರೆಸ್ವಾಮಿ ಬಗ್ಗೆ ಲಘುವಾಗಿ ಮಾತಾಡುತ್ತಾರೆ ಎಂದು ಹೇಳಿದರು.