ಬೆಂಗಳೂರು : ರಾಜ್ಯ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಪೂರ್ಣಗೊಳಿಸಿರುವ ಹಿನ್ನೆಲೆ ಸರ್ಕಾರದ ಸಾಧನೆಯನ್ನು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ರಾಜ್ಯದ ಜನರ ಮುಂದಿಡಲಿದ್ದಾರೆ.
ನಾಳೆ ಬೆಳಗ್ಗೆ 11ಗಂಟೆಗೆ ವಿಧಾನಸೌಧದಲ್ಲಿ ನಡೆಯಲಿರುವ ವರ್ಚುವಲ್ ಕಾರ್ಯಕ್ರಮದ ಮೂಲಕ ನಾಡಿನ ಜನತೆಗೆ ವರ್ಷದ ಸಾಧನೆಯನ್ನು ಸಿಎಂ ಎಳೆ ಎಳೆಯಾಗಿ ಬಿಡಿಸಿಡಲಿದ್ದಾರೆ. ಜೊತೆಗೆ ಸರ್ಕಾರದ ಸಾಧನೆಯ ಸಾಧನಾ ಹೊತ್ತಿಗೆ "ಸವಾಲುಗಳ 1ವರ್ಷ ಪರಿಹಾರದ ಸ್ಪರ್ಷ"ವನ್ನು ಬಿಡುಗಡೆ ಮಾಡಲಿದ್ದಾರೆ. ಕಾರ್ಯಕ್ರಮವನ್ನು ಆನ್‌ಲೈನ್ ಮೂಲಕ ನೇರ ಪ್ರಸಾರ ಮಾಡಲಾಗುತ್ತದೆ.
ಈ ಕುರಿತು ಟ್ವೀಟ್ ಮಾಡಿರುವ ಸಿಎಂ, ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಒಂದು ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಜುಲೈ 27ರಂದು ಬೆಳಗ್ಗೆ 11ಗಂಟೆಯಿಂದ ನಡೆಯುವ ಸರಳ ಆನ್‌ಲೈನ್ ಸಮಾರಂಭದ ಮೂಲಕ ಸರ್ಕಾರದ ಕಾರ್ಯನಿರ್ವಹಣಾ ವರದಿಯನ್ನು ರಾಜ್ಯದ ಜನತೆಗೆ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.