ಬೆಂಗಳೂರು: ಮತ್ತೆ ನಾಯಕತ್ವ ಬಗ್ಗೆ ಹೇಳಿಕೆ ನೀಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಕಿಡಿಕಾರಿದ್ದಾರೆ.
ಯಶವಂತಪುರ ಎಪಿಎಂಸಿ ಯಾರ್ಡ್ನಲ್ಲಿ ಮಾತನಾಡಿದ ಅವರು, ಇಂತಹ ವಿಷಯಗಳನ್ನೆಲ್ಲ ಮಾತನಾಡಲು ಬಸನಗೌಡ ಪಾಟೀಲ್ ಯಾರು? ಅವರಿಗೆ ಮಾತಾಡೋದು ಇದ್ರೆ ಪಕ್ಷದ ಚೌಕಟ್ಟಿನೊಳಗೆ ಮಾತನಾಡಲಿ. ಅವರು ಇಂತಹ ಹೇಳಿಕೆಗಳನ್ನು ಕೊಡೋದನ್ನು ನಿಲ್ಲಿಸಲಿ. ಅವರ ಭವಿಷ್ಯದ ದೃಷ್ಟಿಯಿಂದ ಇಂತಹ ಹೇಳಿಕೆಗಳನ್ನು ಯತ್ನಾಳ್ ಕೊಡದಿರಲಿ ಎಂದು ಎಚ್ಚರಿಕೆ ನೀಡಿದರು.
ಯಾರು ಎಲ್ಲಿ ಹೇಳಬೇಕೋ ಅಲ್ಲಿ ಹೇಳಿದ್ರೆ ಮಾತ್ರ ಅದಕ್ಕೆ ನಿಜವಾದ ಅರ್ಥ ಹಾಗೂ ಗೌರವ ಸಿಗುತ್ತದೆ. ಅವರೇನು ನಮ್ಮ ಪಕ್ಷದ ರಾಷ್ಟ್ರೀಯ ನಾಯಕ ಅಲ್ಲ. ನಮ್ಮ ರಾಜ್ಯದ ಪಕ್ಷದ ಯಾವುದೇ ಅಧ್ಯಕ್ಷನೂ ಅಲ್ಲ. ಅವರೊಬ್ಬ ಸಾಮಾನ್ಯ ಶಾಸಕ ಅಷ್ಟೇ. ದಿನನಿತ್ಯ ಮಾಧ್ಯಮಗಳಿಗೆ ಹಾಗೂ ಹೊರಗೆ ಮಾತಾಡೋದು ಅವರಿಗೆ ಶೋಭೆ ತರುವುದಿಲ್ಲ. ಅವರು ಏನಾದರೂ ಹೇಳೋದು ಇದ್ರೆ ರಾಷ್ಟ್ರೀಯ ನಾಯಕರು ಅಥವಾ ಪಕ್ಷದ ರಾಜ್ಯಾದ ಅಧ್ಯಕ್ಷರ ಜೊತೆ ಮಾತನಾಡಬೇಕು. ಆದರೆ ಬೀದಿಯಲ್ಲಿ ಮಾತನಾಡಿ ಅವರ ಭವಿಷ್ಯದ ಬಗ್ಗೆ ಒಳ್ಳೆಯ ಪರಿಣಾಮ ಬೀರುವುದಿಲ್ಲ ಎಂದರು.
ಇದನ್ನೂ ಓದಿ.. ಸದಾನಂದಗೌಡರಿಗೆ ನಮ್ಮ ಮೇಲೆ ಮೊದಲಿನಿಂದಲೂ ಪ್ರೀತಿ ಜಾಸ್ತಿ: ಶಾಸಕ ಯತ್ನಾಳ್
ಯತ್ನಾಳ್ ವಿರುದ್ಧ ಕ್ರಮ ಯಾಕೆ ತೆಗೆದುಕೊಂಡಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕೆಲವೊಂದನ್ನು ಅವರವರೇ ಅರ್ಥ ಮಾಡಿಕೊಳ್ಳಬೇಕು. ಕೆಲವರಿಗೆ ಕೆಲ ಸಂದರ್ಭ, ಸಮಯ ಬರುತ್ತದೆ. ತಮ್ಮ ಅಸ್ತಿತ್ವ ಉಳಿಸಿಕೊಳ್ಳೋದಕ್ಕೆ ಕೆಲವರು ಮಾತನಾಡುತ್ತಾರೆ ಎಂದು ಕಿಡಿಕಾರಿದರು.
ನಾಯಕತ್ವ ಬದಲಾವಣೆ ಇಲ್ಲ:
ಯತ್ನಾಳ್ ಹೇಳಿಕೆಗೆ ಪರಿಷತ್ ಸದಸ್ಯ ಎನ್.ರವಿಕುಮಾರ್ ಆಕ್ರೋಶ ವ್ಯಕ್ತಪಡಿಸಿ, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ. ಬಸನಗೌಡ ಪಾಟೀಲ್ ಯತ್ನಾಳ್ಗೆ ಸಚಿವ ಸ್ಥಾನ ಸಿಕ್ಕಿಲ್ಲ ಎಂಬ ಬೇಸರ ಇದೆ. ಹೀಗಾಗಿ ಯತ್ನಾಳ್ ಇಂತಹ ಹೇಳಿಕೆ ಕೊಡ್ತಿದ್ದಾರೆ. ಈಗಾಗಲೇ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸಹ ನಾಯಕತ್ವ ಬದಲಾವಣೆ ಇಲ್ಲ ಅಂದಿದ್ದಾರೆ. ಯತ್ನಾಳ್ ಅವರ ಹೇಳಿಕೆಗಳನ್ನು ಹೈಕಮಾಂಡ್ ಗಮನಿಸುತ್ತಿದೆ. ಸೂಕ್ತ ಸಂದರ್ಭಲ್ಲಿ ವರಿಷ್ಠರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದರು.