ಬೆಂಗಳೂರು: ಈಗಾಗಲೇ ರಾಜ್ಯದಲ್ಲಿ ನೂತನ ಖನಿಜ ನೀತಿ ಜಾರಿಗೊಳಿಸುವುದಾಗಿ ಸಿಎಂ ಯಡಿಯೂರಪ್ಪ ಬಜೆಟ್ನಲ್ಲಿ ಘೋಷಿಸಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಹೂಡಿಕೆ ಸ್ನೇಹಿ ಖನಿಜ ನೀತಿ ರೂಪಿಸಲು ಸರ್ಕಾರ ಮುಂದಾಗಿದೆ.
ರಾಜ್ಯದಲ್ಲಿ ಗಣಿಗಾರಿಕೆ ಕ್ಷೇತ್ರವನ್ನು ಮತ್ತೆ ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ನೂತನ ಖನಿಜ ನೀತಿ ಜಾರಿಗೊಳಿಸಲು ಸಜ್ಜಾಗಿದೆ. ಈ ಸಂಬಂಧ ಮೊನ್ನೆಯ ತಮ್ಮ ಬಜೆಟ್ ನಲ್ಲಿ ಸಿಎಂ ಘೋಷಣೆ ಮಾಡಿದ್ದಾರೆ. ಹೂಡಿಕೆ ಸ್ನೇಹಿ ಖನಿಜ ನೀತಿ ರೂಪಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು 2021-26 ಖನಿಜ ನೀತಿಯನ್ನು ರೂಪಿಸುತ್ತಿದ್ದಾರೆ. ಈ ಹೊಸ ನೀತಿ ಮೂಲಕ ರಾಜ್ಯದಲ್ಲಿ ಗಣಿಗಾರಿಕೆ ಉದ್ಯಮಕ್ಕೆ ಪೂರಕವಾದ ವಾತಾವರಣ ಸೃಷ್ಟಿಸಲು ಸರ್ಕಾರ ಮುಂದಡಿ ಇಟ್ಟಿದೆ.
ಪ್ರಸಕ್ತ ರಾಜ್ಯದಲ್ಲಿ ಗಣಿಗಾರಿಕೆ ಉದ್ಯಮ ಸಂಕಷ್ಟದಲ್ಲಿದ್ದು, ಪೂರಕ ವಾತಾವರಣ ಇಲ್ಲದಂತಾಗಿದೆ. ಹಲವು ಕಠಿಣ ನೀತಿ ನಿಯಮಗಳು ಗಣಿಗಾರಿಕೆ ವಹಿವಾಟಿಕೆಗೆ ಹಿನ್ನಡೆಯಾಗಿ ಪರಿಣಮಿಸಿವೆ. ಇದರಿಂದ ಗಣಿ ಸಂಸ್ಥೆಗಳು ರಾಜ್ಯದಲ್ಲಿ ಹೂಡಿಕೆ ಮಾಡಲು ಸಾಧ್ಯವಾಗುತ್ತಿಲ್ಲ. ಜೊತೆಗೆ ಖನಿಜವನ್ನು ಬೇರೆ ರಾಜ್ಯಗಳಿಗೆ ರಪ್ತು ಮಾಡಲು ಸಾಧ್ಯವಾಗದೇ ಇರುವುದು ಗಣಿಗಾರಿಕೆ ಸಂಸ್ಥೆಗಳಿಗೆ ದೊಡ್ಡ ತಲೆನೋವಾಗಿದೆ. ಇದರಿಂದ ರಾಜ್ಯದ ಆದಾಯಕ್ಕೂ ದೊಡ್ಡ ಪೆಟ್ಟು ನೀಡಿದೆ. ಈ ಎಲ್ಲಾ ಸಮಸ್ಯೆಗಳನ್ನು ನೀಗಿಸಿ ರಾಜ್ಯದಲ್ಲಿ ಪೂರಕ ವಾತಾವರಣ ಸೃಷ್ಟಿಸಲು ರಾಜ್ಯ ಸರ್ಕಾರ ರಾಷ್ಟ್ರೀಯ ಖನಿಜ ನೀತಿಯ ಅನುಸಾರವಾಗಿ ರಾಜ್ಯ ಖನಿಜ ನೀತಿ ರೂಪಿಸುತ್ತಿದೆ.
ಏನಿರಲಿದೆ ಹೊಸ ಖನಿಜ ನೀತಿಯಲ್ಲಿ..?
- ಹೊಸ ಖನಿಜ ನೀತಿ ಹೂಡಿಕೆ ಸ್ನೇಹಿಯಾಗಲಿದ್ದು, ಗಣಿ ಉದ್ಯಮಕ್ಕೆ ಪೂರಕ ವಾತಾವರಣ ಸೃಷ್ಟಿ ಮಾಡಲಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳು ತಿಳಿಸಿದ್ದಾರೆ.
- ಗಣಿ ಸಂಸ್ಥೆಗಳ ವಿಲೀನ, ಖರೀದಿಗೆ ಪೂರಕ ನಿಯಮ, ಗಣಿಗಾರಿಕೆ ಗುತ್ತಿಗೆಯ ವರ್ಗಾವಣೆ ಮತ್ತು ನಿಗದಿತ ಖನಿಜ ಕಾರಿಡಾರ್ಗಳನ್ನು ರಚಿಸುವ ನಿಟ್ಟಿನಲ್ಲಿ ಹೊಸ ಖನಿಜ ನೀತಿಯಲ್ಲಿ ನಿಯಮ ರೂಪಿಸಲು ಚಿಂತನೆ ನಡೆದಿದೆ.
- ಹೊಸ ನೀತಿಯಲ್ಲಿ ಖಾಸಗಿ ಸಹಭಾಗಿತ್ವಕ್ಕೆ ಹೆಚ್ಚಿನ ಮಣೆ ಹಾಕಲಾಗುತ್ತದೆ. ಸಾರ್ವಜನಿಕ ಗಣಿ ಸಂಸ್ಥೆಗಳಿಗೆ ನೀಡಿರುವ ಗಣಿ ಪ್ರದೇಶಗಳು ಹಲವು ವರ್ಷಗಳಿಂದ ಬಳಕೆಯಾಗದೇ ಹಾಗೇ ಉಳಿದಿದ್ದು, ಅವುಗಳನ್ನು ಹರಾಜು ಹಾಕುವ ನಿಟ್ಟಿನಲ್ಲಿ ನೀತಿ ರೂಪಿಸಲು ಚಿಂತನೆ ನಡೆದಿದೆ. ಆ ಮೂಲಕ ಖಾಸಗಿ ಕ್ಷೇತ್ರದ ಭಾಗೀದಾರಿಕೆಗೆ ಅವಕಾಶ ನೀಡುವ ಚಿಂತನೆ ಇದೆ ಎನ್ನಲಾಗಿದೆ.
- ಇದೇ ವೇಳೆ ರಾಯಲ್ಟಿ, ಶುಲ್ಕ, ತೆರಿಗೆ ದರವನ್ನು ಸಡಿಲಗೊಳಿಸುವ ನಿಟ್ಟಿನಲ್ಲೂ ಹೊಸ ಖನಿಜ ನೀತಿಯಲ್ಲಿ ನಿಯಮ ರೂಪಿಸುವುದು.
- ಅದಿರು ಸಾಗಣಿಕೆ, ತೆರವಿಗಾಗಿ ಒಳನಾಡು ಜಲಸಾರಿಗೆ, ಕರಾವಳಿ ಜಲ ಸಾರಿಗೆಯನ್ನು ಸಮರ್ಪಕವಾಗಿ ಬಳಸುವ ನಿಟ್ಟಿನಲ್ಲಿ ಹೊಸ ನೀತಿ ರೂಪಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
- ಪ್ರಮುಖವಾಗಿ ರಾಜ್ಯದ ಖನಿಜ ರಪ್ತು ನಿರ್ಬಂಧವನ್ನು ತೆರವುಗೊಳಿಸಿ ದೀರ್ಘ ಕಾಲೀನ ರಫ್ತು, ಆಮದು ನೀತಿಯನ್ನು ಈ ಹೊಸ ಖನಿಜ ನೀತಿಯಲ್ಲಿ ಸೇರಿಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
- ಹೊಸ ಖನಿಜ ನೀತಿಯಲ್ಲಿ ಹಲವು ಕಠಿಣ ನಿಯಮಗಳನ್ನು ಸಡಿಲಗೊಳಿಸಲು ನಿರ್ಧರಿಸಲಾಗಿದೆ. ರಾಜ್ಯದಲ್ಲಿ ಗಣಿ ಸಂಸ್ಥೆ ಹೂಡಿಕೆ ಮಾಡುವುದು ಹಾಗು ಗಣಿಗಾರಿಕೆ ಪರವಾನಿಗೆ ಪಡೆಯುವ ಪ್ರಕ್ರಿಯೆ ಅತ್ಯಂತ ಸಂಕೀರ್ಣತೆಯಿಂದ ಕೂಡಿದ್ದು, ಈ ಪ್ರಕ್ರಿಯೆಯನ್ನು ಸರಳೀಕರಗೊಳಿಸಲು ಸರ್ಕಾರ ಮುಂದಾಗಿದೆ. ಹೊಸ ನೀತಿಯಲ್ಲಿ ಗಣಿ ಸಂಸ್ಥೆಗಳಿಗೆ 90 ದಿನದೊಳಗೆ ಎನ್‌ಒಸಿ ನೀಡುವ ನಿಟ್ಟಿನಲ್ಲಿ ನಿಯಮ ರೂಪಿಸಲಾಗುತ್ತದೆ. ಗಣಿ ಸಂಸ್ಥೆಗಳು ಪರವಾನಿಗೆಗಾಗಿ ವಿವಿಧ ಇಲಾಖೆಗಳಿಗೆ ವರ್ಷಾನುಗಟ್ಟಲೇ ಸುತ್ತಾಡುವುದನ್ನು ತಪ್ಪಿಸಲಾಗುತ್ತದೆ.
- ವಿವಿಧ ಗಣಿಗಾರಿಕೆ ಪ್ರಸ್ತಾವನೆಗಳ ಅರ್ಜಿಗಳ ವಿಲೇವಾರಿ ಪ್ರಕ್ರಿಯೆಯನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ಏಕ ಗವಾಕ್ಷಿ ವ್ಯವಸ್ಥೆಯನ್ನು ತರಲಾಗಯವುದು. ಏಕ ಗವಾಕ್ಷಿ ಸಂಸ್ಥೆಯನ್ನು ರಚಿಸುವ ಮೂಲಕ ತ್ವರಿತಗತಿಯಲ್ಲಿ ಅರ್ಜಿ ವಿಲೇವಾರಿ ಪ್ರಕ್ರಿಯೆ ಪೂರ್ಣಗೊಳಿಸುವ ನಿಟ್ಟಿನಲ್ಲಿ ಖನಿಜ ನೀತಿ ರೂಪಿಸಲಾಗುತ್ತಿದೆ. ಆ ಮೂಲಕ ರಾಜ್ಯದಲ್ಲಿ ಸುಗಮ ಗಣಿಗಾರಿಕೆ ವಾತಾವರಣ ತರಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
- ಇದೇ ವೇಳೆ ಗಣಿಗಾರಿಕೆ ನಿಯಮ ಉಲ್ಲಂಘಿಸಿದ ಸಂಸ್ಥೆಗಳಿಗೆ ಒನ್ ಟೈಮ್ ಸೆಟ್ಲ್ ಮೆಂಟ್ ಯೋಜನೆ ತರಲು ಸರ್ಕಾರ ಮುಂದಾಗಿದೆ. ನಿಯಮ ಉಲ್ಲಂಘಿಸಿದ ಗಣಿ ಸಂಸ್ಥೆಗಳಿಗೆ ವಿಧಿಸಲಾಗಿರುವ ದಂಡದ ಮೊತ್ತ ಸುಮಾರು 6,700 ಕೋಟಿ ರೂ. ತಲುಪಿದೆ. ಆದರೆ, ಈ ದಂಡದ ಮೊತ್ತವನ್ನು ವಸೂಲಿ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಒನ್ ಟೈಮ್ ಸೆಟ್ಲ್ ಮೆಂಟ್ ಯೋಜನೆ ಮೂಲಕ ಕೆಲ ವಿನಾಯಿತಿ ನೀಡಿ, ಈ ದಂಡದ ಮೊತ್ತವನ್ನು ವಸೂಲಿ ಮಾಡಲೂ ಸರ್ಕಾರ ಚಿಂತನೆ ನಡೆಸಿದೆ.