ಬೆಂಗಳೂರು: ಕೊರೊನಾ ಕಾಣಿಸಿಕೊಂಡು ಡಿಸೆಂಬರ್ಗೆ ಒಂದು ವರ್ಷ ಪೂರ್ಣಗೊಳ್ಳಲಿದೆ. ಅಂದು ಶುರುವಾದ ಎದೆಬಡಿತ ಈವರೆಗೂ ನಿಂತಿಲ್ಲ. ಮನೆ ಒಳಗೂ - ಹೊರಗೆ ಎಲ್ಲೇ ಹೋದರೂ ಕೊರೊನಾ ಮೇನಿಯಾದ್ದೇ ಸದ್ದು. ಕೊರೊನಾವಷ್ಟೇ ಈಗ ಜೀವ ಹಿಂಡುತ್ತಿಲ್ಲ. ಅದಕ್ಕೂ ಮುನ್ನ ಸೃಷ್ಟಿಯಾಗಿದ್ದ ಮಹಾಮಾರಿಗಳು ಸಹ ಕಾಟ ಕೊಡುತ್ತಿವೆ.
ಮಾರಣಾಂತಿಕ ಪರಿಸ್ಥಿತಿಗಳಿಂದ ಮಕ್ಕಳನ್ನು ರಕ್ಷಿಸುವ ಪ್ರಮುಖಗಳಲ್ಲಿ ರೋಗ ನಿರೋಧಕ ಕಾರ್ಯಕ್ರಮ ಕೂಡ ಒಂದು. ಯುನಿವರ್ಸಲ್ ಇಮ್ಯುನೈಸೇಷನ್ ಕಾರ್ಯಕ್ರಮದಡಿ ಬಿಸಿಜಿ, ಪೋಲಿಯೋ, ಹೆಪಟೈಟಿಸ್-ಬಿ, ಒಪಿವಿ, ರೋಟಾ ವೈರಸ್ ಲಸಿಕೆ, ದಡಾರ, ವಿಟಮಿನ್ ಎ ಮತ್ತು ಇತರರಿಗೆ ಸಂಬಂಧಿಸಿದ ಲಸಿಕೆಗಳನ್ನು ಮಕ್ಕಳಿಗೆ ನೀಡಲಾಗುತ್ತದೆ. ಆದರೆ, ಈ ಕೋವಿಡ್ ಸಂದರ್ಭದಲ್ಲಿ ಮಕ್ಕಳಿಗೆ ಹೇಗೆಲ್ಲ ಲಸಿಕೆ ನೀಡಲಾಯಿತು? ಎಷ್ಟೆಲ್ಲ ಗುರಿ ಇತ್ತು? ಅದರ ಸಾಧನೆ ಎಷ್ಟಾಗಿದೆ ಎಂಬುದನ್ನು ಈ ಮುಂದೆ ನೋಡೋಣ.
ಕೊರೊನಾ ನಡುವೆ ಆರೋಗ್ಯ ಇಲಾಖೆ ಬಳಿ ಮಕ್ಕಳನ್ನು ರಕ್ಷಿಸುವ ಲಸಿಕೆಗಳಿದ್ದರೂ ಸರಿಯಾದ ಸಮಯಕ್ಕೆ ಲಸಿಕೆ ಹಾಕುವ ಗುರಿ ತಲುಪಲು ಸಾಧ್ಯವಾಗದೇ ಇರುವುದನ್ನು ಕಾಣಬಹುದು. ಕೊರೊನಾ ಲಾಕ್ಡೌನ್ ಅದಕ್ಕೆ ಕಾರಣ. ಅಂದಹಾಗೇ ರಾಜ್ಯದಲ್ಲಿ ಪ್ರಸುತ್ತ ಸುಮಾರು 2,357 ಪ್ರಾಥಮಿಕ ಆರೋಗ್ಯ ಕೇಂದ್ರ, 8,870ಕ್ಕೂ ಹೆಚ್ಚು ಉಪಕೇಂದ್ರಗಳು, 326 ಸಮುದಾಯ ಆರೋಗ್ಯ ಕೇಂದ್ರ ಸೇರಿದಂತೆ ತಾಲೂಕಿಗೊಂದು ಹಾಗೂ ಜಿಲ್ಲೆಗೆ ಒಂದು ಆಸ್ಪತ್ರೆಗಳಿವೆ.
ಅದರಲ್ಲಿ ಭಾಗಶಃ ಕೊರೊನಾ ಆಸ್ಪತ್ರೆಯಾಗಿ ಮಾರ್ಪಟ್ಟಿವೆ. ಹಾಗೆ ರಾಜ್ಯದಲ್ಲಿ ಸುಮಾರು 35,000 ಕ್ಕೂ ಅಧಿಕ ಆಶಾ ಕಾರ್ಯಕರ್ತೆಯರಿದ್ದು, ಪ್ರತಿ ಗ್ರಾಮ ಅಥವಾ 1,000 ಜನಸಂಖ್ಯೆಗೆ ಒಬ್ಬರಂತೆ ನಿಯೋಜನೆ ಮಾಡಲಾಗುತ್ತದೆ. ಅವರೆಲ್ಲರೂ ಕೊರೊನಾ ಬಗೆಗಿನ ಜಾಗೃತಿ, ಮಾಹಿತಿ ಕಲೆ ಹಾಕುವುದು, ಸರ್ವೇ ಕೆಲಸದಲ್ಲೇ ನಿರತರಾದ ಕಾರಣ ರಾಷ್ಟ್ರೀಯ ಲಸಿಕಾ ಕಾರ್ಯಕ್ರಮಗಳಿಗೆ ಬ್ರೇಕ್ ಬಿದ್ದಿತು. ಲಸಿಕೆ ಹಾಕಲು ನೂರೆಂಟು ವಿಘ್ನ ಉಂಟಾಗಲು ಕಾರಣಗಳು ಹೀಗಿವೆ.

ಇನ್ನು ಕೊರೊನಾದ ಸಂಕಷ್ಟದ ಸಮಯದಲ್ಲೂ ಯಶಸ್ವಿಯಾಗಿ ಲಸಿಕಾ ಕಾರ್ಯಕ್ರಮದ ಗುರಿಯನ್ನು ಹಲವು ಜಿಲ್ಲೆಗಳು ತಲುಪಿವೆ. ಹಾಗೆಯೇ ಇನ್ನು ಹಲವು ಜಿಲ್ಲೆಗಳು ಹಿಂದೆ ಉಳಿದಿರುವ ಪಟ್ಟಿಯನ್ನು ಈ ಮುಂದೆ ಕಾಣಬಹುದು.

ರೋಗ ನಿರೋಧಿಕರಣ ವ್ಯಾಪ್ತಿ (ಏಪ್ರಿಲ್-ಆಗಸ್ಟ್-2020)
ರೋಗ ನಿರೋಧಿಕರಣ ವ್ಯಾಪ್ತಿ ಕುರಿತು ಮಾಹಿತಿ

- ವರ್ಷಾವಾರು ಸಾಧನೆ (ಶೇಕಡವಾರು)
ಏಪ್ರಿಲ್ | ಮೇ | ಜೂನ್ | ಜುಲೈ | ||||
---|---|---|---|---|---|---|---|
2019 | 2020 | 2019 | 2020 | 2019 | 2020 | 2019 | 2020 |
89% | 29% | 92% | 73% | 94% | 81% | 97% | 105% |
ಒಂದು ತಿಂಗಳ ಕಾಲ ಸ್ಥಗಿತ: ಒಂದು ತಿಂಗಳ ಕಾಲ ಲಸಿಕಾಕರಣ ಸ್ಥಗಿತವಾಗಿತ್ತು. ಹೆರಿಗೆ ಸಂದರ್ಭದಲ್ಲಿ ಬಿಸಿಜಿ ಲಸಿಕೆ ಬಿಟ್ಟು ಬೇರೆಲ್ಲಾ ಲಸಿಕೆಗಳನ್ನು ನಿಲ್ಲಿಸಲಾಗಿತ್ತು. ಆದರೆ, ತಿಂಗಳ ನಂತರ ಇತರ ಮಾರಣಾಂತಿಕ ಕಾಯಿಲೆಗಳು ಹೆಚ್ಚಾಗುವ ಸಂಭವವಿದ್ದ ಕಾರಣ, ಎಲ್ಲಡೆ ಶುರು ಮಾಡಲಾಯಿತು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಯ ನಿರ್ದೇಶಕ ಓಂ ಪ್ರಕಾಶ ಪಾಟೀಲ್ ಅವರು ಈಟಿವಿ ಭಾರತ್ಗೆ ತಿಳಿಸಿದ್ದಾರೆ.
ಕೊರೊನಾ ಆರಂಭದ ದಿನಗಳಲ್ಲಿ ಲಸಿಕಾಕರಣಕ್ಕೆ ತೊಂದರೆ ಉಂಟಾಗಿದ್ದು ನಿಜ. ಆದರೆ ನಂತರ ಹಂತ ಹಂತವಾಗಿ ಲಸಿಕಾ ಕಾರ್ಯಕ್ರಮದ ಗುರಿ ತಲುಪಿದ್ದೇವೆ. ಕೊರೊನಾ ಕಾಲಘಟ್ಟದಿಂದಾಗಿ ಸಿಬ್ಬಂದಿ ಕೊರತೆ ಹಾಗೂ ಇತರ ಸಮಸ್ಯೆ ಹೆಚ್ಚಾಗಿತ್ತು. ಆದರೆ, ನಂತರದ ತಿಂಗಳಲ್ಲಿ ಗುರಿ ಮುಟ್ಟಲಾಗಿದೆ ಎಂದರು. ಕೊರೊನಾ ಮಿತಿ ಮೀರಿ ಹರಡುತ್ತಿದ್ದು, ಈ ನಡುವೆ ಲಸಿಕಾ ಕಾರ್ಯಕ್ರಮಕ್ಕೂ ತೊಡಕಾಗುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ಅದನ್ನು ಆರೋಗ್ಯ ಇಲಾಖೆ ಎಷ್ಟರ ಮಟ್ಟಿಗೆ ನಿರ್ವಹಣೆ ಮಾಡಲಿದೆ ಎಂಬುದೇ ಕುತೂಹಲ ಮೂಡಿಸಿದೆ.