ಬೆಂಗಳೂರು: ರಾಜ್ಯ ಸರ್ಕಾರ ಎರಡನೇ ಬಾರಿ ಸುಗ್ರೀವಾಜ್ಞೆ ಮೂಲಕ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರಲು ಮುಂದಾದರೆ ಇದನ್ನು ಖಂಡಿಸುತ್ತೇವೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ರೈತರಿಂದ ಕೃಷಿ ಭೂಮಿಯನ್ನು ಕಿತ್ತುಕೊಳ್ಳಲೇಬೇಕೆಂಬ ಹಟಕ್ಕೆ ಬಿದ್ದಿರುವ ರಾಜ್ಯ ಬಿಜೆಪಿ ಸರ್ಕಾರ ಎರಡನೇ ಬಾರಿ ಸುಗ್ರೀವಾಜ್ಞೆ ಮೂಲಕ ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯನ್ನು ಜಾರಿಗೊಳಿಸಲು ಹೊರಟಿದೆ. ರೈತ ಸಮುದಾಯ ಈ ದ್ರೋಹವನ್ನು ಎಂದೆಂದಿಗೂ ಕ್ಷಮಿಸದು ಎಂದಿದ್ದಾರೆ.
ಒಂದೆಡೆ ಕೊರೊನಾ ಸೋಂಕು, ಇನ್ನೊಂದೆಡೆ ಅತಿವೃಷ್ಟಿಯಿಂದಾಗಿ ನೆಲ ಹಿಡಿದಿರುವ ರೈತ ಸಮುದಾಯಕ್ಕೆ ನೆರವಾಗಲು ಆದ್ಯತೆ ನೀಡಬೇಕಾಗಿದ್ದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಭೂಮಿ ಕಿತ್ತುಕೊಳ್ಳುವ ತರಾತುರಿಯಲ್ಲಿರುವುದು ಅವರ ಅಸಲಿ ರೈತ ವಿರೋಧಿ ಮುಖವನ್ನು ಅನಾವರಣಗೊಳಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯಾದ್ಯಂತ ರೈತರು ಕೊರೊನಾ ಸೋಂಕನ್ನು ಲೆಕ್ಕಿಸದೆ ಪ್ರಾಣವನ್ನು ಒತ್ತೆ ಇಟ್ಟು ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯನ್ನು ವಿರೋಧಿಸಿದ್ದರು. ಈ ರೈತರ ಶಾಪ ರಾಜ್ಯ ಬಿಜೆಪಿ ಸರ್ಕಾರಕ್ಕೆ ತಟ್ಟದೆ ಇರದು. ರೈತ ವಿರೋಧಿ ತಿದ್ದುಪಡಿಗೆ ರಾಜ್ಯ ಕಾಂಗ್ರೆಸ್ ಪಕ್ಷದ ಪ್ರತಿರೋಧ ಸದನದ ಒಳಗೆ ಮತ್ತು ಹೊರಗೆ ಮುಂದುವರಿಯಲಿದೆ ಎಂದು ಹೇಳಿದ್ದಾರೆ.