ಬೆಂಗಳೂರು: ಲಂಪಿಸ್ಕಿನ್ ಹತೋಟಿಯಲ್ಲಿ ನಿರ್ಲಕ್ಷ ತೋರುವ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇನೆ ಎಂದು ಪಶುಸಂಗೋಪನಾ, ಹಜ್ ಮತ್ತು ವಕ್ಫ್ ಸಚಿವ ಪ್ರಭು ಚೌಹಾಣ್ ಎಚ್ಚರಿಕೆ ನೀಡಿದ್ದಾರೆ.
ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ರೈತರಿಂದ ದೂರುಗಳು ಬರುತ್ತಿವೆ. ರೋಗ ಹೆಚ್ಚಿರುವ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಿಂದ ಹೆಚ್ಚು ಕರೆಗಳು ಬರುತ್ತಿವೆ. ಪಶುವೈದ್ಯರು ನಿರ್ಲಕ್ಷ ತೋರಿದ ಬಗ್ಗೆ ತಿಳಿದು ಬಂದಿದೆ. ಈ ಕುರಿತು ಪಶುಸಂಗೋಪನೆ ಇಲಾಖೆಯ ಕಾರ್ಯದರ್ಶಿ, ಆಯುಕ್ತರು ಹಾಗೂ ನಿರ್ದೇಶಕರಿಗೆ ಸೂಕ್ತ ಕ್ರಮಕೈಗೊಳ್ಳಲು ಸೂಚನೆ ನೀಡಿದ್ದೇನೆ ಎಂದು ಸಚಿವರು ತಿಳಿಸಿದ್ದಾರೆ.
ರಾಜ್ಯದ 12 ಜಿಲ್ಲೆಗಳ 39 ತಾಲೂಕುಗಳಲ್ಲಿ ಸುಮಾರು 2,2030 ಜಾನುವಾರುಗಳಲ್ಲಿ ರೋಗೋದ್ರೇಕ ಕಾಣಿಸಿಕೊಂಡಿದ್ದು, ‘ಲಂಪಿಸ್ಕಿನ್’ ರೋಗದಿಂದ ಜಾನುವಾರುಗಳ ಆರೋಗ್ಯ ಹದಗೆಡುತ್ತಿರುವ ಬಗ್ಗೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಕರೆ ಬರುತ್ತಿವೆ. ಇಲಾಖೆಯ ಕಾರ್ಯದರ್ಶಿಯವರ ನೇತೃತ್ವದಲ್ಲಿ ತಂಡ ರಚಿಸಿ ರೋಗ ಹತೋಟಿಗೆ ಕ್ರಮ ಕೈಗೊಳ್ಳಲು ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದ ಬೀದರ್, ಯಾದಗಿರಿ, ಕಲಬುರಗಿ, ರಾಯಚೂರಿನಲ್ಲಿ ರೋಗ ಹೆಚ್ಚು ವ್ಯಾಪಿಸುತ್ತಿದ್ದು, ಈ ಭಾಗಗಳಲ್ಲಿ ಲಸಿಕೆ ಪೂರೈಕೆಯಲ್ಲಿ ವ್ಯತ್ಯಯವಾದರೆ ಅಧಿಕಾರಿಗಳ ತಲೆದಂಡವಾಗುವುದು ಖಂಡಿತ ಎಂದು ಎಚ್ಚರಿಕೆ ನೀಡಿದ್ದಾರೆ.
ಅಲ್ಲದೇ, ಈ ಜಿಲ್ಲೆಗಳಿಗೆ 96,300 ಮೇಕೆ ಸಿಡುಬು ಲಸಿಕೆ ಸರಬರಾಜು ಮಾಡಲಾಗಿದೆ. ಬೆಂಗಳೂರಿನ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆ ಸುಮಾರು 6 ಲಕ್ಷ ಡೋಸ್ಗಳ ಮೇಕೆ ಸಿಡುಬು ಲಸಿಕೆ ಉತ್ಪಾದನೆ ಹಂತದಲ್ಲಿದ್ದು, ಕೂಡಲೇ ರೋಗೋದ್ರೇಕ ಕಾಣಿಸಿಕೊಂಡಿರುವ ಜಿಲ್ಲೆಗಳಿಗೆ ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ.
ರೋಗೋದ್ರೇಕ ಕಾಣಿಸಿಕೊಂಡ ಗ್ರಾಮಗಳಲ್ಲಿನ ರೋಗಪೀಡಿತ ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆಯನ್ನು ಸ್ಥಳೀಯ ಪಶುವೈದ್ಯರು ನೀಡಬೇಕು. ಬಾಧಿತ ಪ್ರದೇಶದಲ್ಲಿ ಜಾನುವಾರು ಸಾಗಣೆಕೆಯ ಮೇಲೆ ನಿರ್ಬಂಧ ಹೇರಲಾಗಿದ್ದು, 5 ಕಿ.ಮೀ ವ್ಯಾಪ್ತಿಯಲ್ಲಿ ವ್ಯಾಪಕ ಲಸಿಕಾ ಕಾರ್ಯಕ್ರಮದ ಮೂಲಕ ರೋಗವನ್ನು ಪರಿಣಾಮಕಾರಿಯಾಗಿ ತಡೆಯಲು ಕ್ರಮ ವಹಿಸಲಾಗುತ್ತಿದೆ ಎಂದು ವಿವರಿಸಿದ್ದಾರೆ.