ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಳವಾಗಿರುವುದಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಿರ್ಧಾರಗಳೇ ಕಾರಣ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆರೋಪಿಸಿದ್ದಾರೆ .
ಕೊರೊನಾ ಆತಂಕ ರಾಜ್ಯದಲ್ಲಿ ಹೆಚ್ಚುತ್ತಿರುವ ಸಂದರ್ಭದಲ್ಲಿ, ಇದರ ನಿಯಂತ್ರಣಕ್ಕೆ ಜವಾಬ್ದಾರಿಯುತ ಪ್ರತಿಪಕ್ಷವಾಗಿ ನಾವು ನೀಡುತ್ತಿರುವ ಸಲಹೆಯನ್ನು ಸರ್ಕಾರ ಪರಿಗಣಿಸುತ್ತಿಲ್ಲ. ಸಾಕಷ್ಟು ಸಲಹೆ ಸೂಚನೆಗಳನ್ನು ನೀಡಿದ್ದರೂ ಅದನ್ನು ನಿರ್ಲಕ್ಷಿಸಿದೆ. ಯಾವ ವಿಚಾರಕ್ಕೂ ಪ್ರತಿಪಕ್ಷವಾಗಿ ನಮ್ಮನ್ನು ವಿಶ್ವಾಸಕ್ಕೆ ಪಡೆದಿಲ್ಲ ಎಂದು ಖಂಡ್ರೆ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ನಾವು ರಸ್ತೆಗಿಳಿದು ಪ್ರತಿಭಟಿಸುವ ಅನಿವಾರ್ಯ ಎದುರಾಗಿದೆ. ಈ ವಿಚಾರವನ್ನು ವಿಧಾನಸಭೆ ಪ್ರತಿಪಕ್ಷದ ನಾಯಕರಾದ ಸಿದ್ದರಾಮಯ್ಯ ಈಗಾಗಲೇ ತಿಳಿಸಿದ್ದು, ಈ ನಿಟ್ಟಿನಲ್ಲಿ ಸಿದ್ಧತೆ ನಡೆಸಿಕೊಳ್ಳುತ್ತಿದ್ದೇವೆ ಎಂದು ಈಟಿವಿ ಭಾರತ ಜೊತೆ ಮಾತನಾಡಿದ ಸಂದರ್ಭ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ವಿವರಿಸಿದ್ದಾರೆ.