ಬೆಂಗಳೂರು: ಗೋಹತ್ಯೆ ನಿಷೇಧ ಕಾಯ್ದೆ ರದ್ದುಕೋರಿ ಸಲ್ಲಿಸಿರುವ ಪಿಐಎಲ್ಗಳಿಗೆ ಕಡೆಗೂ ಅಕ್ಷೇಪಣೆ ಸಲ್ಲಿಸಿರುವ ರಾಜ್ಯ ಸರ್ಕಾರ, ರಾಜ್ಯದಲ್ಲಿ ಜಾನುವಾರುಗಳ ಸಂತತಿ ಕ್ಷೀಣಿಸಿದ್ದು, ಅವುಗಳ ಸಂರಕ್ಷಣೆಗಾಗಿ ಕಾಯ್ದೆ ಜಾರಿ ಮಾಡಿರುವುದಾಗಿ ತಿಳಿಸಿದೆ.
ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ ಪ್ರಶ್ನಿಸಿ ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತ ಆರೀಫ್ ಜಮೀಲ್, ಕಸಾಯಿ ಖಾನೆ ಮಾಲೀಕರು ಮತ್ತು ಗೋಮಾಂಸ ಮಾರಾಟಗಾರರು ಸಲ್ಲಿಸಿರುವ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಇಂದು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕಾ ನೇತೃತ್ವದ ವಿಭಾಗೀಯಪೀಠ ವಿಚಾರಣೆ ನಡೆಸಿತು.
ಈ ವೇಳೆ ಸರ್ಕಾರದ ಪರ ವಾದ ಮಂಡಿಸಿದ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಗಿ, ಎಲ್ಲಾ ಅರ್ಜಿಗಳಿಗೆ ವಿವರವಾದ ಆಕ್ಷೇಪಣೆ ಸಲ್ಲಿಸಲಾಗಿದೆ. ಅದರ ಪ್ರತಿಗಳನ್ನು ಅರ್ಜಿದಾರರಿಗೆ ಕಳುಹಿಸಲಾಗುವುದು ಎಂದು ತಿಳಿಸಿದರು. ಅಲ್ಲದೇ, ರಾಜ್ಯದಲ್ಲಿ ಜಾನುವಾರುಗಳನ್ನು ಸಾಗಿಸುವವರ ವಿರುದ್ಧ ಯಾವುದೇ ಬಲವಂತದ ಕ್ರಮ ಜರುಗಿಸದಂತೆ ಎಲ್ಲಾ ಪೊಲೀಸ್ ಠಾಣೆಗಳಿಗೆ ಮತ್ತೊಮ್ಮೆ ನಿರ್ದೇಶಿಸಿ ಸುತ್ತೋಲೆ ಹೊರಡಿಸಲಾಗಿದೆ ಎಂದರು.
ಹೇಳಿಕೆ ದಾಖಲಿಸಿಕೊಂಡ ಪೀಠ, ರಾಜ್ಯ ಸರ್ಕಾರದ ಆಕ್ಷೇಪಣೆಗೆ ಸಂಬಂಧಿಸಿದಂತೆ ವಾದವೇನಾದರೂ ಇದ್ದರೆ, ಅದನ್ನು ಜೂನ್ 14ರೊಳಗೆ ಲಿಖಿತವಾಗಿ ಸಲ್ಲಿಸುವಂತೆ ಎಲ್ಲಾ ಅಜಿರ್ದಾರರಿಗೆ ಸೂಚಿಸಿ, ವಿಚಾರಣೆ ಮುಂದೂಡಿತು.
ಸರ್ಕಾರದ ಆಕ್ಷೇಪಣೆ:
2020-2021 ನೇ ಸಾಲಿನಲ್ಲಿ ದೇಶದ ಕೃಷಿ ಕ್ಷೇತ್ರದಿಂದ 1.28 ಲಕ್ಷ ಕೋಟಿ ರೂ. ಆದಾಯ ಬಂದಿದೆ. ಇದರಲ್ಲಿ 52,688 ಕೋಟಿ ರೂ. ಗೋವುಗಳ ಕೊಡುಗೆಯಾಗಿದೆ. ಕೃಷಿ ಪ್ರಧಾನವಾಗಿರುವ ರಾಜ್ಯದ ಆರ್ಥಿಕತೆಗೆ ಗೋವುಗಳು ಬೆನ್ನೆಲುಬಾಗಿವೆ. ರೈತರ ಆದಾಯದ ಪ್ರಮುಖ ಮೂಲಗಳಾಗಿವೆ. ರಾಜ್ಯದಲ್ಲಿ ಶೇ.80ರಷ್ಟು ರೈತರು ಎರಡು ಹೆಕ್ಟೇರ್ ಗಿಂತ ಕಡಿಮೆ ಭೂಮಿ ಹೊಂದಿದ್ದು, ಅವರು ತಮ್ಮ ಕೃಷಿ ಚಟುವಟಿಕೆಗಳಿಗೆ ಟ್ರಾಕ್ಟರ್ ಬದಲಾಗಿ ಜಾನುವಾರುಗಳನ್ನೇ ಅವಲಂಬಿಸಿದ್ದಾರೆ. ಎತ್ತು ಮತ್ತು ಕೋಣಗಳನ್ನು ಕೃಷಿ ಚಟುವಟಿಕೆಗಳಿಗೆ, ಸಂತಾನೋತ್ಪತ್ತಿಗೆ ಬಳಸಲಾಗುತ್ತಿದೆ. ಬಯೋಗ್ಯಾಸ್ ಹಾಗೂ ಸಾವಯವ ಗೊಬ್ಬರ ಉತ್ಪಾದನೆಗೆ ಜಾನುವಾರುಗಳು ಅಗತ್ಯವಾಗಿವೆ. 19ನೇ ಜಾನುವಾರು ಗಣತಿ ಪ್ರಕಾರ ರಾಜ್ಯದಲ್ಲಿ ಜಾನುವಾರಗಳ ಸಂಖ್ಯೆ 95,16,484 ಇತ್ತು. 20ನೇ ಜಾನುವಾರು ಗಣತಿ ಪ್ರಕಾರ 84,690,04ಕ್ಕೆ ಇಳಿದಿದೆ. ಈ ಎಲ್ಲಾ ಕಾರಣಗಳಿಗಾಗಿ ಜಾನುವಾರುಗಳ ಸಂತತಿಯನ್ನು ಸಂರಕ್ಷಣೆ ಮಾಡಲು ಹಾಗೂ ಅಭಿವೃದ್ಧಿಗೊಳಿಸಲು ಸರ್ಕಾರ ಕಾಯ್ದೆ ರೂಪಿಸಿದೆ ಎಂದು ಆಕ್ಷೇಪಣೆಯಲ್ಲಿ ತಿಳಿಸಿದೆ.