ಬೆಂಗಳೂರು: ಆಫ್ಲೈನ್ ಮೂಲಕ ಸೆಮಿಸ್ಟರ್ ಪರೀಕ್ಷೆ ನಡೆಸಲು ಮುಂದಾಗಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ಕ್ರಮಕ್ಕೆ ಆಕ್ಷೇಪಿಸಿರುವ 120ಕ್ಕೂ ಅಧಿಕ ವಿದ್ಯಾರ್ಥಿಗಳು ತಮಗೆ ಮೊದಲಿನಂತೆ ಆನ್ಲೈನ್ ಮೂಲಕವೇ ಪರೀಕ್ಷೆ ನಡೆಸಲು ನಿರ್ದೇಶಿಸಬೇಕು ಎಂದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ರೂಪಾಂತರ ಹೊಂದಿರುವ ಕೊರೊನಾ ವೈರಸ್ನಿಂದ ಸಮಸ್ಯೆ ಎದುರಾಗಬಹುದು ಎಂಬ ಭೀತಿಯಲ್ಲಿರುವ ವಿದ್ಯಾರ್ಥಿಗಳು, ಆಫ್ಲೈನ್ ಮೂಲಕ ಪರೀಕ್ಷೆ ನಡೆಸುವುದು ಬೇಡ. ಬದಲಿಗೆ ಆನ್ಲೈನ್ ಮೂಲಕವೇ ಪರೀಕ್ಷೆ ನಡೆಸಲು ವಿವಿಗೆ ನಿರ್ದೇಶಿಸಿ ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದು, ಅರ್ಜಿ ಇನ್ನೂ ವಿಚಾರಣೆಗೆ ನಿಗದಿಯಾಗಬೇಕಿದೆ.
ವಿದ್ಯಾರ್ಥಿಗಳ ಕೋರಿಕೆ:
ರಾಜ್ಯದಲ್ಲಿ ಈಗಾಗಲೇ ಹಲವು ಜನರಲ್ಲಿ ರೂಪಾಂತರಿ ಕೊರೊನಾ ಸೋಂಕು ಪತ್ತೆಯಾಗಿದೆ. ಜೊತೆಗೆ ಕೋವಿಡ್ ಎರಡನೇ ಅಲೆ ಭೀತಿಯೂ ಇದೆ. ಇಂತಹ ಸಂದರ್ಭದಲ್ಲಿ ವಿವಿ ಆಫ್ಲೈನ್ ಮೂಲಕ ಪರೀಕ್ಷೆ ನಡೆಸಲು ಪ್ರಕಟಣೆ ಹೊರಡಿಸಿದೆ. ಒಂದು ವೇಳೆ ವಿವಿ ಆಫ್ಲೈನ್ ಮೂಲಕವೇ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸಿದರೆ, ಹಲವು ವಿದ್ಯಾರ್ಥಿಗಳು ಬೇರೆ-ಬೇರೆ ಜಿಲ್ಲೆಗಳು, ರಾಜ್ಯಗಳಿಂದ ಪ್ರಯಾಣಿಸಬೇಕಾಗುತ್ತದೆ. ಇದರಿಂದ ಕೋವಿಡ್ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಲಿದೆ. ಆಫ್ಲೈನ್ ಮೂಲಕ ಪರೀಕ್ಷೆಗಳನ್ನು ನಡೆಸುವುದು ವಿದ್ಯಾರ್ಥಿಗಳ ಪ್ರಾಣವನ್ನು ಅಪಾಯಕ್ಕೆ ಒಡ್ಡಿದಂತಾಗುತ್ತದೆ. ಜೊತೆಗೆ ವಿದ್ಯಾರ್ಥಿಗಳ ಆರೋಗ್ಯ ರಕ್ಷಣೆ ಹಕ್ಕನ್ನು ಉಲ್ಲಂಘಿಸಿದಂತಾಗುತ್ತದೆ.
ವಿವಿಯ ಈ ನಿರ್ಧಾರ ಯುಜಿಸಿ ಮಾರ್ಗಸೂಚಿಗಳಿಗೂ ವಿರುದ್ಧವಾಗಿದೆ. ಧನಸಹಾಯ ಆಯೋಗ ಕೋವಿಡ್ ಹಿನ್ನೆಲೆಯಲ್ಲಿ ಆನ್ಲೈನ್ ಅಥವಾ ಆಫ್ಲೈನ್ಲ್ಲಿ ಪರೀಕ್ಷೆ ನಡೆಸಬಹುದು ಎಂದು ಹೇಳಿತ್ತು. ಆದರೆ, ವಿಟಿಯು ಆನ್ಲೈನ್ಗೆ ಅವಕಾಶ ನೀಡದೆ, ಕೇವಲ ಆಫ್ಲೈನ್ನಲ್ಲಿಯೇ ಪರೀಕ್ಷೆಗಳನ್ನು ನಡೆಸಲು ನಿರ್ಧರಿಸಿರುವುದು ನಿಯಮಬಾಹಿರ ಕ್ರಮ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಅಲ್ಲದೇ, ಸೆಮಿಸ್ಟರ್ ಪರೀಕ್ಷೆಯಲ್ಲಿ 12 ವಿಷಯಗಳಿದ್ದು, ಅವುಗಳಿಗೆ ಕನಿಷ್ಠ 2 ರಿಂದ 3 ವಾರ ಪರೀಕ್ಷೆ ನಡೆಸಬೇಕಾಗುತ್ತದೆ. ಪ್ರಸಕ್ತ ಆರ್ಥಿಕ ಬಿಕ್ಕಟ್ಟಿಗೆ ಒಳಗಾಗಿರುವ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಆಹಾರ, ಸುರಕ್ಷತೆಗೆ ಹೆಚ್ಚಿನ ಹಣ ವ್ಯಯ ಮಾಡುವುದು ಕಷ್ಟ. ಆದ್ದರಿಂದ ಇದೇ ಜ. 14ರಿಂದ ನಿಗದಿಯಾಗಿರುವ ಸೆಮಿಸ್ಟರ್ ಪರೀಕ್ಷೆಗಳಿಗೆ ತಡೆ ನೀಡಬೇಕು. ಹಾಗೆಯೇ ವಿವಿಗೆ ಆನ್ಲೈನ್ ಮೂಲಕ ಪರೀಕ್ಷೆಗಳನ್ನು ನಡೆಸಲು ನಿರ್ದೇಶಿಸಬೇಕು ಎಂದು ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.